

ಬೆಂಗಳೂರು: ವ್ಯಾಪಾರಿಗಳಿಂದ ಹಣ ಸಂಗ್ರಹಿಸಿ ಕಾರಿನಲ್ಲಿ ತೆರಳುತ್ತಿದ್ದ ಸಿಗರೇಟ್ ವಿತರಕನನ್ನು ಅಡ್ಡಗಟ್ಟಿರುವ ದುಷ್ಕರ್ವಿುಗಳು 45.5 ಲಕ್ಷ ರೂ. ದರೋಡೆ ಮಾಡಿದ್ದಾರೆ. ಐಟಿಸಿ ಕಂಪನಿ ವಿತರಕ ವಿಜಯನಗರ ನಿವಾಸಿ ರಾಕೇಶ್ ಪೊಕರಾನಾ ದರೋಡೆಗೆ ಒಳಗಾದವರು.
ಕಳ್ಳರ ಪತ್ತೆಗೆ 3 ತಂಡ ರಚನೆ ನಾಲ್ವರು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ರಾಕೇಶ್ ಅವರ ವ್ಯವಹಾರದ ಕುರಿತು ಗೊತ್ತಿದ್ದವರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಜಸ್ಥಾನ ಮೂಲದ ರಾಕೇಶ್ ಬಳಿ 100ಕ್ಕೂ ಹೆಚ್ಚು ಮಂದಿ ಕೆಲಸಗಾರರಿದ್ದಾರೆ. ಕಂಪನಿಯಿಂದ ಮಾಲ್, ಚಿಲ್ಲರೆ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡಲಾಗುತ್ತದೆ. ಜೂ.11ರ ಸಂಜೆ 6 ಗಂಟೆಯಲ್ಲಿ ಸೇಲ್ಸ್ಮ್ಯಾನ್ಗಳು ವ್ಯಾಪಾರಿಗಳಿಂದ ಸಂಗ್ರಹಿಸಿ ಕೊಟ್ಟಿದ್ದ ಹಣವನ್ನು ಬಿಸ್ಕೆಟ್ ಡಬ್ಬಿಯಲ್ಲಿಟ್ಟುಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಹಣವಿದ್ದ ಡಬ್ಬಿಯನ್ನು ಚಾಲಕನ ಪಕ್ಕದಲ್ಲಿರುವ ಸೀಟಿನಲ್ಲಿಟ್ಟು, ರಾಕೇಶ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಬೈಕ್ನಿಂದ ಡಿಕ್ಕಿ ಹೊಡೆದು ಕೃತ್ಯ: ಫ್ರೇಜರ್ಟೌನ್ ಖಾಸಗಿ ಶಾಲೆಯೊಂದರ ರಸ್ತೆಯಲ್ಲಿ ಬರುವಾಗ ಮಾರ್ಗಮಧ್ಯೆ ಬೈಕ್ನಲ್ಲಿ ದುಷ್ಕರ್ವಿುಗಳು ರಾಕೇಶ್ ಕಾರನ್ನು ಹಿಂಬಾಲಿಸಿದ್ದಾರೆ. ಬೈಕ್ ಸವಾರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ಬಳಿಕ ವೇಗವಾಗಿ ಬೈಕ್ ಚಲಾಯಿಸಿ ಕಾರು ಅಡ್ಡಗಟ್ಟಿದ್ದ. ಚಾಲಕ ಕೆಳಗೆ ಇಳಿದು ಬೈಕ್ ಸವಾರನನ್ನು ಪ್ರಶ್ನಿಸಲು ಹೋದಾಗ ಮತ್ತೊಬ್ಬ ಕಾರಿನ ಡೋರ್ ತೆಗೆದು ಹಣವಿದ್ದ ಬಾಕ್ಸ್ ಎತ್ತಿಕೊಳ್ಳಲು ಯತ್ನಿಸಿದ್ದ. ಆತನನ್ನು ತಡೆಯಲು ರಾಕೇಶ್ ಮುಂದಾದಾಗ ಇನ್ನಿಬ್ಬರು ದುಷ್ಕರ್ವಿುಗಳು ಬಂದು ಚಾಕು ತೋರಿಸಿ ಬೆದರಿಸಿ ಹಣವಿದ್ದ ಬಾಕ್ಸ್ ದೋಚಿ ಪರಾರಿಯಾಗಿದ್ದಾರೆ ಎಂದು ಪುಲಕೇಶಿನಗರ ಪೊಲೀಸರು ತಿಳಿಸಿದ್ದಾರೆ.