ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?

LPG
Published on

ನವದೆಹಲಿ: ಮನೆ ಬಳಕೆಯ ಅಡುಗೆ ಅನಿಲದ ಮೇಲಿನ ಸಬ್ಸಿಡಿ ಇನ್ನು ಮುಂದೆ ಗ್ರಾಹಕರ ಬ್ಯಾಂಕ್​ ಖಾತೆಗೆ ಜಮಾ ಆಗುವುದಿಲ್ಲ. ಕಾರಣ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್​ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನೊಂದೆಡೆ, ತೈಲೋತ್ಪನ್ನಗಳಿಂದ ಬರಬೇಕಾದ ತೆರಿಗೆ ಆದಾಯ ಕುಸಿಯದಂತಿರಲು ಸರ್ಕಾರ ನಿಯಮಿತವಾಗಿ ಪೆಟ್ರೋಲ್​, ಡೀಸೆಲ್​ ಹಾಗೂ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಬಂದಿದೆ.

ಈ ಕಾರಣದಿಂದಾಗಿ ಸದ್ಯ ಗೃಹ ಬಳಕೆಗೆ ನೀಡಲಾಗುತ್ತಿರುವ ಸಬ್ಸಿಡಿ ಅಡುಗೆ ಅನಿಲದ ದರ ಹಾಗೂ ಮಾರುಕಟ್ಟೆಯ ಬೆಲೆ ಒಂದೇ ಆಗಿದೆ. ಈ ಕಾರಣದಿಂದಾಗಿ ಸಬ್ಸಿಡಿ ನೀಡುವುದನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸೆ.1ರಂದು ಸಬ್ಸಿಡಿರಹಿತ ಹಾಗೂ ಸಬ್ಸಿಡಿಸಹಿತ ಅಡುಗೆ ಅನಿಲದ 14.2 ಕೆಜಿ ಸಿಲಿಂಡರ್​ ಬೆಲೆ 594 ರೂ. ಆಗಿತ್ತು. ಹೀಗಾಗಿ ವ್ಯತ್ಯಾಸದ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ನಿರ್ಧಾರದಿಂದಾಗಿ ಸರ್ಕಾರಕ್ಕೆ ಕನಿಷ್ಠ 20 ಸಾವಿರ ಕೋಟಿ ರೂ.ಗಳ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net