

ಕರೊನಾ ಲಸಿಕೆ ಸಂಶೋಧನೆ ಈಗ ಆಯಾ ದೇಶಗಳಲ್ಲಿ ರಾಜಕೀಯವಾಗಿಯೂ ಅತ್ಯಂತ ಪ್ರಮುಖ ಎನಿಸಿಕೊಂಡಿದೆ. ಈ ಕಾರಣಕ್ಕೆ ತಮ್ಮ ಅಧಿಕಾರವಧಿಯಲ್ಲಿ ಸಿದ್ಧವಾಗಬೇಕೆಂಬ ಕಾರಣಕ್ಕೆ ಅದರಲ್ಲೂ ಚುನಾವಣೆ ನಡೆಯಲಿರುವ ಪ್ರದೇಶಗಳಲ್ಲಿ ಕರೊನಾ ಲಸಿಕೆಗೆ ಭಾರಿ ಬೇಡಿಕೆ ಬಂದಿದೆ.
ಅಂತೆಯೇ, ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ನಡೆಯುತ್ತಿರುವ ಅಮೆರಿಕದಲ್ಲಂತೂ ಮರು ಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ ಮತದಾನಕ್ಕೂ ಮುನ್ನ ಜನರಿಗೆ ಲಸಿಕೆ ತಲುಪಿಸಲೇಬೇಕು ಎಂಬ ಆಕಾಂಕ್ಷೆ ಹೊಂದಿದ್ದಾರೆ. ಇದು ಅವರ ಮರು ಆಯ್ಕೆ ಮೇಲೆ ಭಾರಿ ಪ್ರಭಾವ ಬೀರಲಿರುವುದು ಕೂಡ ಅಷ್ಟೇ ಸತ್ಯ.
ನವೆಂಬರ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ ಅಕ್ಟೋಬರ್ ಅಂತ್ಯದ ವೇಳೆಗೆ ಶತಾಯಗತಾಯ ಕರೊನಾ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎನ್ನುವುದು ಟ್ರಂಪ್ ಉದ್ದೇಶ. ಇದಕ್ಕಾಗಿ ಅಮೆರಿಕ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ಡಾಲರ್ಗಳನ್ನು ವ್ಯಯಿಸಿದೆ.
ಅಂತೆಯೇ, ಅಮೆರಿಕದ ಕಾಯಿಲೆ ತಡೆ ಹಾಗೂ ನಿಯಂತ್ರಣ ಕೇಂದ್ರವು (CDC)ಸೋಂಕು ತಗಲುವ ಸಂಭಾವ್ಯತೆ ಹೆಚ್ಚಾಗಿರುವ (ಹೈ-ರಿಸ್ಕ್) ಜನರಿಗೆ ಕರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ವಿತರಣಾ ಕೇಂದ್ರದ ಸ್ಥಾಪನೆಗೆ ಸಂಸ್ಥೆಯೊಂದರ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಕುರಿತ ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ.
ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಸೀಮಿತ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ರಾಜ್ಯಗಳ ಬೇಡಿಕೆ ಹಾಗೂ ಸ್ಥಿತಿಗೆ ಅನುಗುಣವಾಗಿ ಆರಂಭಿಕ ಹಂತದ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ಲಸಿಕೆ ವಿತರಣೆ ವಿಚಾರವಾಗಿ ಅಮೆರಿಕದ ಎಲ್ಲ 50 ರಾಜ್ಯಗಳು ಹಾಗೂ 5 ಪ್ರಮುಖ ನಗರಗಳ ಅಧಿಕಾರಿಗಳನ್ನು CDC ಅಧಿಕಾರಿಗಳು ಸಂಪರ್ಕಿಸಿದ್ದಾರೆ ಎಂದು ಮಾಧ್ಯಮಗಳು ಕೂಡ ವರದಿ ಮಾಡಿವೆ.
ಅಮೆರಿಕದಲ್ಲಿ ಈಗಾಗಲೇ ಹಲವು ಲಸಿಕೆಗಳು ಮಾನವರ ಮೇಲಿನ ಪ್ರಯೋಗದಲ್ಲಿ ಅಂತಿಮ ಹಂತದಲ್ಲಿವೆ. ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಕನಿಷ್ಠ ಒಂದು ಲಸಿಕೆ ಬಳಕೆಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದಕ್ಕೆ ಅಗತ್ಯ ಕ್ಲಿನಿಕಲ್ ಮಾಹಿತಿ ಲಭ್ಯವಾಗಲಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಅಂಥೋನಿ ಫೌಸಿ ಹೇಳಿದ್ದಾರೆ.
ಅಮೆರಿಕದ್ದೇ ಆದ ಮಾಡೆರ್ನಾ ಲಸಿಕೆಯನ್ನು 30 ಸಾವಿರಕ್ಕೂ ಅಧಿಕ ಜನರ ಮೇಲೆ ಪ್ರಯೋಗಿಸಲಾಗಿದೆ. ಜತೆಗೆ, ಇಂಗ್ಲೆಂಡ್ನ ಆಕ್ಸ್ಫರ್ಡ್ ವಿವಿಯ ಮತ್ತೊಂದು ಲಸಿಕೆ ಕೂಡ ಒಟ್ಟಾರೆ 50 ಸಾವಿರ ಜನರ ಮೇಲೆ ಪ್ರಯೋಗಕ್ಕೆ ಒಳಗಾಗಿದೆ. ಇವೆರಡರ ಮೇಲೆಯೇ ಭಾರಿ ಭರವಸೆ ಇಡಲಾಗಿದೆ. ಅಲ್ಲಿಗೆ ಅಕ್ಟೋಬರ್ ಅಂತ್ಯಕ್ಕೆ ಕನಿಷ್ಠ ಒಂದು ಲಸಿಕೆ ಅಮೆರಿಕನ್ನರ ಬಳಕೆಗೆ ಲಭ್ಯವಾಗುವುದು ಖಚಿತ ಎನಿಸಲಿದೆ.