ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ : ಸಚಿವ ಬಿ.ಸಿ.ಪಾಟೀಲ್

B C PATIL MINISTER
Published on

ಬೆಂಗಳೂರು : ದೈನಂದಿನ ಕೃಷಿ ಚಟುವಟಿಕೆಗಳಿಗೆ ಮತ್ತು ಕೃಷಿ ಇಲಾಖೆಗೆ ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ, ಜನತಾ ಕರ್ಫ್ಯೂ ಅನ್ವಯಿಸುವುದಿಲ್ಲ. ಯಾವುದೇ ಇಲಾಖೆಯ ಯಾವುದೇ ಅಧಿಕಾರಿಗಳು ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ತಡೆ ಅಥವಾ ತೊಂದರೆ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಮಾತನಾಡಿದ ಸಚಿವ ಪಾಟೀಲ್, ಹೂವು, ಹಣ್ಣು, ದವಸ ಧಾನ್ಯ ಮಾರುಕಟ್ಟೆಗೆ ಸಾಗಿಸಲು ಆರ್.ಟಿ.ಒ. ಸೇರಿದಂತೆ ಯಾರೂ ತೊಂದರೆ ಮಾಡಬಾರದು. ಬಿತ್ತನೆ ಕಾರ್ಯಕ್ಕಾಗಿ ಪೊಲೀಸ್ ಆಗಲೀ ಯಾವುದೇ ಇಲಾಖೆಯಾಗಲಿ ತೊಂದರೆ ಮಾಡಬಾರದು. ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು, ರಸಗೊಬ್ಬರ ಅಂಗಡಿಗಳಿಗಾಗಲೀ, ರೈತ ಸಂಪರ್ಕ ಕೇಂದ್ರಗಳಿಗಾಗಲೀ, ಬಿತ್ತನೆ ಕಾರ್ಯಕ್ಕಾಗಲೀ ಯಾರೂ ಸಹ ತೊಂದರೆಯನ್ನುಂಟು ಮಾಡಬಾರದು ಎಂದಿದ್ದಾರೆ.

ಕೆಲವು ಕಡೆ ಕೃಷಿ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿರುತ್ತದೆ. ಹೀಗೆ ಮಾಡಿರುವುದು ತಪ್ಪು. ಎಲ್ಲಾ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸಹಕಾರ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹೇರಬಾರದು. ಕರೊನಾ ಸುರಕ್ಷತಾ ಕ್ರಮಗಳೊಂದಿಗೆ, ಸಾಮಾಜಿಕ ಅಂತರದ ಜೊತೆಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಬಿ.ಸಿ.ಪಾಟೀಲ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net