More

    ಬಾರದ ಮಳೆ, ಕಾದ ಇಳೆ

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಕೋಟೇಶ್ವರ ಜಾತ್ರೆಗೆ ಮಳೆ ಬರುತ್ತದೆ. ಬೈಂದೂರು ಸೇನೇಶ್ವರ ದೇವಸ್ಥಾನ ಓಕುಳಿಗೆ ಮಳೆ ಸುರಿಯದಿರುವುದಿಲ್ಲ. ಹಕ್ಲಾಡಿ ಮಾಣಿಕೊಳಲು ಶ್ರೀಚೆನ್ನಕೇಶವ ದೇವಸ್ಥಾನ ರಥೋತ್ಸವಕ್ಕೆ ಮಳೆ ತಪ್ಪಿದ್ದೇ ಇಲ್ಲ… ಇದೆಲ್ಲ ಒಂದು ಕಾಲದ ನಂಬಿಕೆ. ಕಾಕತಾಳೀಯವೋ ಅಲ್ಲ ಜನರ ನಂಬಿಕೆಯೋ ಈ ಎಲ್ಲ ರಥೋತ್ಸವಗಳಿಗೆ ಬರುತ್ತಿತ್ತು ಅನ್ನುವುದು ಸತ್ಯ.

    ಈ ವರ್ಷ ಅಬ್ಬರದಲ್ಲಿ ಮೋಡ ಕಟ್ಟಿದ್ದೇ ಇಲ್ಲ. ಮೇ ತಿಂಗಳ ಮಧ್ಯದಲ್ಲಿ ಮಳೆ ಬಂದರೂ ಬಿಸಿಲು ಬೇಗೆ ಹೆಚ್ಚಿ ತಾಪ ಏರಿದೆ. ಪರಿಣಾಮವಾಗಿ ನೀರಿಲ್ಲದೆ ಅಡಕೆ, ತೆಂಗು ತಲೆ ಕಳಚಿಕೊಳ್ಳುತ್ತಿದೆ. ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ನೀರಿಗಾಗಿ ಅಲೆಯುವ ಪ್ರಾಣಿ ಪಕ್ಷಿಗಳ ಸಂಕಟ, ಎಲೆ ಬಾಡಿಸಿ ನಿಂತ ಮರಗಿಡಗಳ ಸ್ಥಿತಿಯಂತೂ ಹೇಳತೀರದು.

    ಟ್ಯಾಂಕರ್ ಮೂಲಕ ನೀರು

    ಪ್ರತಿವರ್ಷ ಸುರಿಯುತ್ತಿದ್ದ ಮುಂಗಾರುಪೂರ್ವ ಮಳೆ ಈ ಬಾರಿ ಮುನಿಸಿಕೊಂಡಿದೆ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿದ್ದ ಮಳೆ ಅತ್ಯಂತ ಕನಿಷ್ಠ. ಇದರ ನೇರ ಪರಿಣಾಮ ಮಾತ್ರ ಕುಡಿಯುವ ನೀರಿನ ಮೇಲಾಗಿದೆ. ಎಲ್ಲೆಡೆ ಕೆರೆ, ಮದಗ ಬಾವಿಗಳು ಬತ್ತಿದೆ. ಮನುಷ್ಯರಿಗೆ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಆದರೆ ಪ್ರಾಣಿ-ಪಕ್ಷಿಗಳನ್ನು ಕೇಳುವವರಿಲ್ಲ.

    ಮಳೆ ಪ್ರಮಾಣ ಕನಿಷ್ಠ

    ಹಿಂದೆ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕರಾವಳಿಯಲ್ಲಿ ಮಳೆಯಾಗುತ್ತಿದ್ದರಿಂದ ನೀರು ಸಂಪೂರ್ಣ ಖಾಲಿಯಾಗುವುದಕ್ಕೆ ಅವಕಾಶವಿರಲಿಲ್ಲ. ಈ ವರ್ಷ ಮಾತ್ರ ಜೂನ್ ತಿಂಗಳ ಅರಂಭದ ಅಂಚಿಗೆ ಬಂದರೂ ಮಳೆ ನಾಪತ್ತೆ. ಈವರೆಗೆ ಬಿದ್ದ ಮಳೆಯ ಪ್ರಮಾಣ ಲೆಕ್ಕ ಹಾಕಿದರೆ ಅತ್ಯಂತ ಕನಿಷ್ಠ.

    ಈ ವರ್ಷ ಜನವರಿಯಿಂದ ಮೇ 30ರ ತನಕ ಬಿದ್ದ ಮಳೆಯ ಪ್ರಮಾಣ ಕೇವಲ 33 ಮಿ.ಮೀ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ವರುಣ ಮುನಿಸಿಕೊಂಡು ಕೂತಿದ್ದಾನೆ. ಮೇ ತಿಂಗಳು ಅರ್ಧಗಂಟೆ ಮಳೆ ಬಂದು ಹೋಗಿದ್ದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಹೆಚ್ಚು ಮಳೆ ಸುರಿಯಬೇಕಿದ್ದ ಮೇ ತಿಂಗಳಲ್ಲಿ ಬಿದ್ದ ಮಳೆ ಕೇವಲ 24 ಮಿ.ಮೀ. ಮಾತ್ರ.

    ವಾಡಿಕೆ ತಪ್ಪಿದ ವರ್ಷಧಾರೆ

    ಹವಾಮಾನ ಇಲಾಖೆ ಪ್ರಕಾರ ಜನವರಿಯಿಂದ ಮೇ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 201 ಮಿ.ಮೀ. ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ 1 ಮಿ.ಮೀ., ಮಾರ್ಚ್‌ನಲ್ಲಿ 8.5 ಮಿ.ಮೀ., ಏಪ್ರಿಲ್‌ನಲ್ಲಿ 26 ಮಿ.ಮೀ. ಹಾಗೂ ಮೇನಲ್ಲಿ 165 ಮಿ.ಮೀ. ಮಳೆಯಾಗುತ್ತದೆ. ಮೇ ತಿಂಗಳಿನಲ್ಲಿ 2019ರಲ್ಲಿ 27 ಮಿ.ಮೀ., 2020ರಲ್ಲಿ 170 ಮಿ.ಮೀ. 2021ರಲ್ಲಿ 616 ಮಿ.ಮೀ., 2022ರಲ್ಲಿ 434 ಮಿ.ಮೀ. ಮಳೆಯಾಗಿದ್ದರೆ, 2023ರಲ್ಲಿ 33 ಮಿ.ಮೀ. ಅಷ್ಟೇ ಸುರಿದಿದೆ.

    ಟ್ಯಾಂಕರ್ ನೀರೇ ಗತಿ

    ಉಡುಪಿ ಜಿಲ್ಲೆಯಲ್ಲಿ ನೀರಿಗಾಗಿ ಸರ್ಕಾರ ಸುರಿದ ದುಡ್ಡು 400 ಕೋಟಿ ರೂ. ವಾರಾಹಿ ಏತನೀರಾವರಿ, ಸೌಪರ್ಣಿಕಾ ಏತನೀರಾವರಿ, ಎಣ್ಣೆಹೊಳೆ ಅಣೆಕಟ್ಟು, ಸೀತಾನದಿ ಡ್ಯಾಂ, ಸುವರ್ಣ ಅಣೆಕಟ್ಟು ಹೀಗೆ ಅನುದಾನ ಸುರಿದು ಸುರಿದು ಸುಸ್ತಾಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಸ್ಥಿತಿಯಿಂದ ಪಾರಾಗಿಲ್ಲ. ಜಿಲ್ಲೆಯ ಯಾವ ಪಂಚಾಯಿತಿಯಲ್ಲಿ ಕುಡಿಯುವ ನೀರು ಸಮಸ್ಯೆ ಇತ್ತೋ ಆ ಎಲ್ಲ ಪಂಚಾಯಿತಿಗಳಿಗೆ ಟ್ಯಾಂಕರ್ ನೀರಿನಿಂದ ಮುಕ್ತಿಯೂ ಸಿಕ್ಕಿಲ್ಲ.

    ಮಳೆ ನೀರು ಹಿಡಿದಿಡುವ ಮಳೆಕಾಡು ಕಣ್ಮರೆ, ಹೊಳೆಗಳ ಸ್ವಾಭಾವಿಕ ಪಥ ಬದಲಾವಣೆ, ಹಳ್ಳಕೊಳ್ಳಗಳು ಹರಿವು ನಿಲ್ಲಿಸಿದ್ದರಿಂದ ಅಂತರ್ಜಲಮಟ್ಟ ಕುಸಿತವಾಗಿದೆ. ಅವೈಜ್ಞಾನಿಕ ಕಿಂಡಿ ಅಣೆಕಟ್ಟೆಗಳು ಬಾವಿ ಕೆರೆ ನೀರು ಒಣಗಿಸಿವೆ. ಹೊಳೆ ಬದಿ ಬಾವಿ ನೀರು ಬಳಕೆಗೆ ಅಯೋಗ್ಯವಾಗಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ನಮ್ಮ ಅವ್ಯವಸ್ಥೆಯೇ ಕಾರಣ.
    -ರಾಘವೇಂದ್ರ ಭಟ್, ಕೃಷಿಕ, ಭಟ್ರತೋಟ ನಾಡ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts