More

    ಪ್ರಗತಿಯಲ್ಲಿ ಹೆದ್ದಾರಿ ಕಾಮಗಾರಿ

    -ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಮಳೆಗಾಲ ಸಮೀಪಿಸುತ್ತಿದ್ದರೂ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಹಾಳಾದ ಹಲವೆಡೆ ಹೆದ್ದಾರಿ ತುರ್ತು ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

    ಹೆದ್ದಾರಿಯ ಮಧ್ಯದಲ್ಲಿ ಕುಸಿತ

    ಹೆಮ್ಮಾಡಿಯಿಂದ ಮರವಂತೆ ತನಕ ಹೊಸದಾಗಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಹಲವೆಡೆ ಕುಸಿತ ಕಂಡು ಬಂದಿದ್ದು, ಚರಂಡಿ ನಿರ್ಮಾಣಗೊಂಡಿತ್ತು. ಅವೈಜ್ಞಾನಿಕವಾಗಿ ಮುಚ್ಚಲಾಗಿದ್ದ ಹೊಂಡ ಈ ಬಾರಿ ಮಳೆಗಾಲದಲ್ಲಿ ಮತ್ತೊಮ್ಮೆ ಬಾಯ್ದೆರೆಯುವ ಸಾಧ್ಯತೆಯಿತ್ತು. ಇಂತಹ ಸ್ಥಳಗಳಲ್ಲಿ ಮರು ಡಾಂಬರೀಕರಣ ಮಾಡಿ ಹೆದ್ದಾರಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಹೆಮ್ಮಾಡಿಯಿಂದ ಮರವಂತೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಆಯ್ದ ಕಡೆಗಳಲ್ಲಿ ಹೆದ್ದಾರಿ ದುರಸ್ತಿ ಕಾರ್ಯ ನಡೆಯುತ್ತಿದೆ. ನಾಲ್ಕು ರಸ್ತೆಗಳು ಸೇರುವ, ಜನನಿಬಿಢ ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ಕೆಲವು ಕಡೆ ರಸ್ತೆ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಇಲ್ಲಿನ ಜನರ ಓಡಾಟಕ್ಕೆ ಮತ್ತು ರಿಕ್ಷಾ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸ್ವಲ್ಪ ಮಟ್ಟಿನ ಅನುಕೂಲ ಮಾಡಿಕೊಟ್ಟಂತಾಗಿದೆ.

    ತುರ್ತು ದುರಸ್ತಿ ಕಾರ್ಯ

    ಮಳೆಗಾಲದ ಆರಂಭಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯ ಕಂಡು ಬಂದಿರುವ ಕುಸಿತ ಸರಿಪಡಿಸಬೇಕು, ಅವೈಜ್ಞಾನಿಕವಾಗಿ ತುಂಬಿರುವ ಹೊಂಡ ಸರಿಯಾಗಿ ತುಂಬಬೇಕು ಎಂಬ ಸ್ಥಳೀಯರ ಹಾಗೂ ವಾಹನ ಚಾಲಕರ ಬೇಡಿಕೆಗಳ ಬಗ್ಗೆ ಕಳೆದ ತಿಂಗಳು ವಿಜಯವಾಣಿ ವರದಿ ಪ್ರಕಟಿಸಿತ್ತು. ವಿಜಯವಾಣಿ ವರದಿಯ ಫಲಶ್ರುತಿಯಾಗಿ ಸ್ಥಳೀಯರ ಹಾಗೂ ವಾಹನ ಚಾಲಕರ ಬೇಡಿಕೆಗಳಿಗೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿ ತುರ್ತು ದುರಸ್ತಿ ಕಾರ್ಯ ನಡೆಸಿದ್ದಾರೆ.

    ತ್ರಾಸಿ ಜಂಕ್ಷನ್ ಮತ್ತು ಮುಳ್ಳಿಕಟ್ಟೆ ಪ್ರದೇಶದಲ್ಲಿ ಅಂಡರ್ ಪಾಸ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಿಕರು ಬೇಡಿಕೆಗಳಿಗೆ ಈವರೆಗೆ ಸ್ಪಂದನೆ ದೊರೆತಿಲ್ಲ. ಅವ್ಯವಸ್ಥೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಿಂದ ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುವ ಸಾಧ್ಯತೆಗಳಿದ್ದು, ಈ ಬಗ್ಗೆ ಗಮನಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

    ಮಳೆಗಾಲ ಸಮೀಪಿಸುತ್ತಿದ್ದರೂ ಕೆಲವು ಅತ್ಯಂತ ಪ್ರಮುಖ ಸ್ಥಳದಲ್ಲಿ ಕಾಮಗಾರಿ ಅಪೂರ್ಣ. ಮಳೆಗಾಲದ ಆರಂಭಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯ ಕಂಡು ಬಂದಿರುವ ಕುಸಿತವನ್ನು ಸರಿಪಡಿಸಬೇಕು, ಅವೈಜ್ಞಾನಿಕವಾಗಿ ತುಂಬಿರುವ ಹೊಂಡಗಳನ್ನು ಸರಿಯಾಗಿ ತುಂಬಬೇಕು ಎಂಬ ಬೇಡಿಕೆಗಳಿಗೆ ಸ್ಪಂದನೆ ದೊರೆತಿದ್ದರೂ ಸಮಪರ್ಕವಾಗಿ ಹೆದ್ದಾರಿ ದುರಸ್ಥಿ ಕಾರ್ಯ ನಡೆಸಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ ತ್ರಾಸಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು.
    -ಮಾರ್ಕ್ ಡಿಅಲ್ಮೇಡಾ, ಸ್ಥಳೀಯರು ತ್ರಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts