More

    ನೀರಿಲ್ಲದೆ ಸೊರಗಿದ ಅಡಕೆ ತೋಟ

    -ಹರಿಪ್ರಸಾದ್ ನಂದಳಿಕೆ ಕಾರ್ಕಳ

    ನೀರಿಲ್ಲದೆ ತೋಟಗಾರಿಕೆ ಬೆಳೆಗಳು ಬಿಸಿಲ ಬೇಗೆಗೆ ಸುಟ್ಟು ಹೋಗುತ್ತಿವೆ. ಕೃಷಿಯನ್ನೇ ನಂಬಿದ ರೈತರು ಕಣ್ಣೀರು ಹಾಕುತ್ತಿದ್ದಾರೆ.

    ತೋಟಗಾರಿಕೆ ಬೆಳೆಯಲ್ಲಿ ಪ್ರಮುಖವಾದ ಅಡಕೆ, ತೆಂಗು ಸಹಿತ ಬಾಳೆ ಕೃಷಿ ಕರಟುತ್ತಿದೆ. ಬಿಸಿಲ ಬೇಗೆಯಿಂದಾಗಿ ಇಡೀ ಕೃಷಿ ತೋಟ ಒಣಗಿದ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ. ಮಳೆಯಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಅಡಕೆ ಕೃಷಿಯನ್ನು ನಂಬಿದ ಕೃಷಿಕರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕರಾವಳಿ ತೀರದ ಜನ ಹೆಚ್ಚಾಗಿ ಬೆಳೆಯುವ ಅಡಕೆ ಕೃಷಿಗೆ ಈ ಭಾರಿ ಬೇಸಿಗೆಯ ಬಿಸಿ ಜತೆ ನೀರಿನ ಅಭಾವದಿಂದ ಮತ್ತಷ್ಟು ಹೊಡೆತ ಬಿದ್ದಿದೆ.

    ಬಿಸಿಲಿನ ಬೇಗೆಗೆ ಶೇ.20ರಷ್ಟು ಅಡಕೆ, ತೆಂಗು, ಬಾಳೆ ಕೃಷಿಗೆ ಹಾನಿಯಾಗಿದೆ. ಅಡಕೆ ತೋಟಗಳು ಬಿಸಿಲ ಬೇಗೆಗೆ ಕಂದು ಬಣ್ಣಕ್ಕೆ ತಿರುಗಿದೆ. ನೀರಿಲ್ಲದೆ ಅಡಕೆ ಗಿಡಗಳು ಸಾಯುತ್ತಿವೆ. ಅಡಕೆ ಕೃಷಿಯನ್ನೇ ನಂಬಿದ ರೈತರು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿ ಒಟ್ಟು 29,044 ಹೆಕ್ಟೆರ್ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದು ಅದರಲ್ಲಿ ಭತ್ತ 7,020 ಹೆಕ್ಟೆರ್, ಅಡಕೆ 9,097 ಹೆಕ್ಟೆರ್, ತೆಂಗು 8,294 ಹೆಕ್ಟೆರ್, ಬಾಳೆ 896 ಹೆಕ್ಟೆರ್, ಗೇರು 1,576 ಹೆಕ್ಟೆರ್, ಕಾಳುಮೆಣಸು 1,034 ಹೆಕ್ಟೆರ್ ಪ್ರದೇಶಗಳಲ್ಲಿ ಬೆಳೆಯುತಿದ್ದಾರೆ. ತೋಟಗಾರಿಕಾ ಬೆಳೆಗಳನ್ನು 24,480 ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಭಾರೀ ನೀರಿಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕೃಷಿ ಬಳಕೆಗೆ ಉಪಯೋಗಿಸುತ್ತಿದ್ದ ಬೋರ್‌ವೆಲ್, ನದಿ ಎಲ್ಲವೂ ಬತ್ತಿದ್ದು ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ.

    ಆದಾಯಕ್ಕೆ ಹೊಡೆತ

    ಕರಾವಳಿ ಭಾಗದ ಕೃಷಿಕರು ಹೆಚ್ಚಾಗಿ ಬೆಳೆಯುತ್ತಿದ್ದ ಅಡಕೆ ಕೃಷಿಗೆ ಬಿಸಿಲ ಬೇಗೆಯಿಂದ ನೀರಿನ ಅಭಾವ ಕಾಡಿದ್ದು ಅಡಕೆ ತೋಟಗಳು ಸಂಪೂರ್ಣ ಸುಟ್ಟು ಕೃಷಿಕರ ಆದಾಯ ಮೂಲಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಅಡಕೆಗೆ ಬೇಡಿಕೆ ಹೆಚ್ಚಿದ್ದರೂ ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಅಡಕೆ ಗಿಡಗಳು ಸುಟ್ಟು ಹೋದಂತಿವೆ.

    ತೊಟಗಾರಿಕೆ ಕೃಷಿ ಬೆಳೆ ಹಾನಿ

    ಸೀತಾನದಿ ಹಾಗೂ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ನದಿ ಹಾಗೂ ಶಾಂಭವಿ ನದಿಯ ನೀರನ್ನು ಅವಲಂಬಿಸಿ ಕೃಷಿ ಮಾಡುತಿದ್ದ ಬೆಳೆಗಾರರು ನೀರಿನ ಹರಿವಿಲ್ಲದೆ ಕಂಗಾಲಾಗಿದ್ದಾರೆ. ಕಾರ್ಕಳ ತಾಲೂಕಿನ ಕೆರುವಾಶೆ, ಹೊಸ್ಮಾರು, ಈದು, ಶಿರ್ಲಾಲು, ಅಜೆಕಾರು, ಎಣ್ಣೆಹೊಳೆ ಹೆರ್ಮುಂಡೆ, ಹಿರ್ಗಾನ, ಇನ್ನಾ, ಕುಕ್ಕುಂದೂರು, ಬೈಲೂರು, ಕೌಡೂರು, ಬೆಳ್ಮಣ್, ನಂದಳಿಕೆ, ಸೂಡ, ಬೋಳ ಹಾಗೂ ಮುಂಡ್ಕೂರು ಗ್ರಾಮಗಳಲ್ಲಿ ಹಾಗೂ ಹೆಬ್ರಿಯ ಚಾರ, ಶಿವಪುರ, ಬೆಳ್ವೆ, ಹಂದಿಕಲ್ಲು, ನಾಡ್ಪಾಲು, ಮುನಿಯಾಲು, ಕುಚ್ಚೂರು ಭಾಗದಲ್ಲಿ ತೋಟಗಾರಿಕಾ ಬೆಳೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇದರಿಂದಾಗಿ ಕೃಷಿಕರು ಚಿಂತೆಗೀಡಾಗಿದ್ದಾರೆ.

    ಪರಿಹಾರ ದೊರಕಿತೆ?

    ಹಾನಿಯಾದ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡುವಂತೆ ಕೃಷಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಬಿಸಿಲಿಗೆ ಹಾನಿಗೀಡಾದ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ದೊರಕಿಸಿಕೊಡಿ ಎಂದು ಕೃಷಿಕರು ಅಧಿಕಾರಿಗಳ ಮೊರೆ ಹೋಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ನೂತನ ಸರ್ಕಾರ ಹೊಸ ಸಂಪೂಟ ರಚಿತವಾಗಿದ್ದು, ಕರಾವಳಿ ಭಾಗದ ಕೃಷಿಕರ ನೋವಿಗೆ ಸ್ಪಂದನೆ ಸಿಗುವಂತೆ ಆಗಬೇಕು ಎಂದು ಸರ್ಕಾರವನ್ನು ಕೃಷಿಕರು ವಿನಂತಿಸಿಕೊಂಡಿದ್ದಾರೆ.

    ಕೊಳವೆಬಾವಿ ಕೊರೆದರೂ ನೀರಿಲ್ಲ

    ಕೃಷಿಯ ಜತೆಗೆ ನಿತ್ಯ ಬಳಕೆ ನೀರಿಗಾಗಿ ಜನ ಪರದಾಟ ನಡೆಸುತ್ತಿದ್ದು, ಕೊಳವೆಬಾವಿ ನಿರ್ಮಿಸುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ನೀರಿನ ಸಮಸ್ಯೆ ನೀಗಲು ಸುಮಾರು 600 ರಿಂದ 700 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ತಾಲೂಕಿನ ಮರ್ಣೆ, ಶಿರ್ಲಾಲು, ಕೆರ್ವಾಶೆ, ಹಾಗೂ ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಯ ಮೊರೆ ಹೋದರೂ ತೊಟ್ಟು ನೀರು ಸಿಗುತ್ತಿಲ್ಲ. ಇನ್ನೊಂದೆಡೆ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ವಾರಕ್ಕೆ 20-30ಕ್ಕೂ ಹೆಚ್ಚು ಕೊಳವೆ ಬಾವಿ ತೋಡಲಾಗುತ್ತಿದ್ದರೂ ಅದರಲ್ಲಿ 10 ರಿಂದ 12 ಕೊಳವೆಬಾವಿಗಳಲ್ಲಿ ಮಾತ್ರ ನೀರಿನ ಒರತೆ ಲಭ್ಯವಾಗುತ್ತಿದೆ. ಇದರಿಂದ ಕೃಷಿಕರು ಮತ್ತಷ್ಟು ಆತಂಕಗೊಂಡಿದ್ದಾರೆ.

    ನೀರಿಲ್ಲದೆ ಕೃಷಿಭೂಮಿ ಬಿಸಿಲ ಬೇಗೆಗೆ ಸುಟ್ಟು ಹೋಗುತ್ತಿದೆ. ಅಡಕೆ ತೋಟಗಳು ಸಾಯುತ್ತಿದೆ. ಹೀಗಾಗಿ ಅಡಕೆ ಕೃಷಿಯನ್ನೇ ನಂಬಿದ ಕೃಷಿಕರು ಕಣ್ಣೀರು ಹಾಕು ಪರಿಸ್ಥಿತಿ ನಿರ್ಮಾಣವಾಗಿದೆ.

    -ಸಾಧು ಮೂಲ್ಯ ಕೃಷಿಕರು

    ಈಗಾಗಲೇ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಸುಮಾರು ಶೇ.20 ತೋಟಗಾರಿಕಾ ಬೆಳೆಗೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಕೃಷಿಕರಿಗೆ ನಷ್ಟ ಉಂಟಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.

    -ಶ್ರೀನಿವಾಸ್, ನಿರ್ದೇಶಕರು ಕಾರ್ಕಳ ತೋಟಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts