More

    ಬಾಗಿಲು ಮುಚ್ಚಿದ ಚೆಕ್‌ಪೋಸ್ಟ್

    ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ನಾಯಕವಾಡಿ ಸಮೀಪ ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ಪ್ರಾರಂಭಿಸಲಾಗಿದ್ದ ಗಂಗೊಳ್ಳಿ ಪೊಲೀಸ್ ಠಾಣೆಯ ಚೆಕ್‌ಪೋಸ್ಟ್ ಬಾಗಿಲು ಮುಚ್ಚಿದೆ.

    ಗಂಗೊಳ್ಳಿಯಲ್ಲಿ 2014ರಲ್ಲಿ ನಡೆದ ಕೋಮುಗಲಭೆ ಹಾಗೂ ಬೆಂಕಿ ಪ್ರಕರಣದ ಬಳಿಕ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ 2015ರಲ್ಲಿ ಗುಜ್ಜಾಡಿ ಗ್ರಾಮದ ನಾಯಕವಾಡಿ ಸಮೀಪ ಪೊಲೀಸ್ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿತ್ತು. ಅಂದಿನ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಚೆಕ್‌ಪೋಸ್ಟ್‌ನಲ್ಲಿ ಸಿಸಿ ಟಿವಿ ಅಳವಡಿಕೆ, ವಿದ್ಯುತ್ ಸಂಪರ್ಕ ಸಹಿತ ಪೊಲೀಸ್ ಸಿಬ್ಬಂದಿಗೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಡೆಸಿದ್ದರು. ಚೆಕ್‌ಪೋಸ್ಟ್‌ನಲ್ಲಿ ನಿತ್ಯ ಸಿಬ್ಬಂದಿ ನೇಮಿಸಿ ಪ್ರತಿಯೊಬ್ಬರ ಚಲನವಲನದ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಚೆಕ್‌ಪೋಸ್ಟ್ ಬಳಿ ಗೇಟ್ ಅಳವಡಿಸಿ ಗಂಗೊಳ್ಳಿಗೆ ಬರುವ ಹಾಗೂ ಗಂಗೊಳ್ಳಿಯಿಂದ ಹೊರ ಹೋಗುವ ವಾಹನಗಳ ತಪಾಸಣೆ ನಡೆಸುವ ಮೂಲಕ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸುವ ಪ್ರಯತ್ನ ನಡೆದಿತ್ತು.

    ಕಾರ್ಯಚಟುವಟಿಕೆ ಸ್ಥಗಿತ

    ಪ್ರಾರಂಭವಾದ ಸುಮಾರು 2 ವರ್ಷ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಚೆಕ್‌ಪೋಸ್ಟ್‌ನಲ್ಲಿ ದಿನಗಳೆದಂತೆ ಕಾರ್ಯ ಚಟುವಟಿಕೆ ಕಡಿಮೆಯಾಗಿತ್ತು. ಅಂದಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವರ್ಗಾವಣೆಗೊಂಡ ಬಳಿಕ ಬಂದ ಇತರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು ನಾಯಕವಾಡಿ ಪೊಲೀಸ್ ಚೆಕ್‌ಪೋಸ್ಟ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಚೆಕ್‌ಪೋಸ್ಟ್ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ ಕೂಡ ಸರಿಯಾಗಿ ನಡೆಯದ ಕಾರಣ ಹಂತ ಹಂತವಾಗಿ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದೆ.

    2 ವರ್ಷದಿಂದ ಪೊಲೀಸ್ ಚೆಕ್‌ಪೋಸ್ಟ್ ಬಾಗಿಲು ಮುಚ್ಚಿದ್ದು, ಕಟ್ಟಡ ನಿರ್ವಹಣೆ ಇಲ್ಲದೆ ಸೊರಗಿ ಹೋಗಲಾರಂಭಿಸಿದೆ. ಅಪರೂಪಕ್ಕೊಮ್ಮೆ ಬಾಗಿಲು ತೆರೆಯುತ್ತಿರುವ ನಾಯಕವಾಡಿ ಚೆಕ್‌ಪೋಸ್ಟ್ ಇದೀಗ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ತಲುಪಿದೆ. ಇಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕೂಡ ಹಾಳಾಗಿದೆ. ದಾನಿಗಳ ಸಹಕಾರದಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ನಿರುಪಯುಕ್ತವಾಗುತ್ತಿದೆ. ಅಂದಿನ ಪೊಲೀಸ್ ಉಪನಿರೀಕ್ಷರ ಶ್ರಮ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಪ್ರಾರಂಭಗೊಂಡಿದ್ದ ಪೊಲೀಸ್ ಚೆಕ್‌ಪೋಸ್ಟ್ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ಬಂದು ನಿಂತಿದೆ.

    ಸಿಬ್ಬಂದಿ ಕೊರತೆ

    ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲು ಸಿಬ್ಬಂದಿ ಕೊರತೆ ಇದೆ. 2014ರ ಕೋಮುಗಲಭೆ ನಡೆದ ಬಳಿಕ ಗಂಗೊಳ್ಳಿಯಲ್ಲಿ ಯಾವುದೇ ಗಂಭೀರ ಪ್ರಕರಣಗಳು ನಡೆದಿಲ್ಲ. ಗಂಗೊಳ್ಳಿಯಲ್ಲಿ ರಾತ್ರಿ ವೇಳೆ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೆಕ್‌ಪೋಸ್ಟ್ ಪ್ರಾರಂಭಿಸುವ ಅಗತ್ಯ ಇಲ್ಲ ಎನ್ನುವುದು ಪೊಲೀಸ್ ಇಲಾಖೆ ಅಧಿಕಾರಿಗಳ ವಾದ.

    ಒಟ್ಟಿನಲ್ಲಿ ನಾಯಕವಾಡಿಯ ಪೊಲೀಸ್ ಚೆಕ್‌ಪೋಸ್ಟ್ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ತಲುಪಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪೊಲೀಸ್ ಚೆಕ್‌ಪೋಸ್ಟ್ ಪ್ರಾರಂಭಿಸುವ ಉದ್ದೇಶವನ್ನು ಅರಿತುಕೊಂಡು ಪೊಲೀಸ್ ಚೆಕ್‌ಪೋಸ್ಟ್‌ಗೆ ಮರುಜೀವ ತುಂಬುವ ಪ್ರಯತ್ನ ನಡೆಸಬೇಕಿದೆ ಹಾಗೂ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯನ್ನು ದುರಸ್ತಿಗೊಳಿಸಿ ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ಇಲಾಖೆ ನಿಗಾ ಇಡಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.

    ನಾಯಕವಾಡಿಯಲ್ಲಿರುವ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ನಿಯೋಜನೆ ಮಾಡಲು ಸಿಬ್ಬಂದಿ ಕೊರತೆ ಇದೆ. ಗಂಗೊಳ್ಳಿಯಲ್ಲಿ ರಾತ್ರಿ ವೇಳೆ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅಗತ್ಯ ಇರುವಾಗ ಮಾತ್ರ ನಾಯಕವಾಡಿ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸಲಿದೆ. ಸದ್ಯ ಇದರ ಅಗತ್ಯ ಇಲ್ಲ.

    -ಸಂತೋಷ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷರು, ಬೈಂದೂರು

    ನಾಯಕವಾಡಿ ಸಮೀಪ ಪ್ರಾರಂಭಿಸಲಾಗಿದ್ದ ಪೊಲೀಸ್ ಚೆಕ್‌ಪೋಸ್ಟ್ ಶಾಶ್ವತವಾಗಿ ಬಾಗಿಲು ಮುಚ್ಚಿದಂತಿದೆ. ಈ ಚೆಕ್‌ಪೋಸ್ಟ್ ಪ್ರಾರಂಭವಾದ ಬಳಿಕ ಅಹಿತಕರ ಘಟನೆಗಳಿಗೆ ಕಡಿವಾಣ ಬಿದ್ದಿತ್ತು. ಕಿಡಿಗೇಡಿಗಳಿಗೆ ಕಂಟಕವಾಗಿದ್ದ ಈ ಚೆಕ್‌ಪೋಸ್ಟ್ ಮುಚ್ಚುವ ಹಂತಕ್ಕೆ ಬಂದಿರುವುದು ದುರದೃಷ್ಟಕರ. ನಾಯಕವಾಡಿ ಚೆಕ್‌ಪೋಸ್ಟ್ ಪುನರಪಿ ಕಾರ್ಯಾಚರಿಸುವಂತೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು.

    -ನವೀನ್ ದೊಡ್ಡಹಿತ್ಲು, ಸಾಮಾಜಿಕ ಕಾರ್ಯಕರ್ತ, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts