More

    ಕಾರ್ಕಳಕ್ಕೆ ಸಿಸಿಟಿವಿ ಕಣ್ಗಾವಲು

    -ಹರಿಪ್ರಸಾದ್ ನಂದಳಿಕೆ, ಕಾರ್ಕಳ

    ಜನದಟ್ಟಣೆಯ ನಗರದಲ್ಲಿ ಹದ್ದಿನ ಕಣ್ಣಿಡಬೇಕಾದ ಸಿಸಿ ಕ್ಯಾಮೆರಾಗಳು ಸುಲಲಿತ ವ್ಯವಸ್ಥೆಗೆ ಅತ್ಯಗತ್ಯ.ಅಹಿತಕರ ಘಟನೆ ಅಥವಾ ಅಪರಾಧ ಕೃತ್ಯ ನಡೆದಾಗ ಆರೋಪಿಗಳನ್ನು ಪತ್ತೆಹಚ್ಚುವುದಕ್ಕೆ ಪೊಲೀಸರಿಗೆ ಬಹು ಸಹಕಾರಿಯಾದ ಸುಳಿವುಗಳನ್ನು ಇವು ಒದಗಿಸುತ್ತವೆ. ಆದರೆ ಅಂತಹ ಕಣ್ಗಾವಲು ಭಾಗ್ಯ ಕಾರ್ಕಳಕ್ಕೆ ಇನ್ನೂ ದೊರೆತಿಲ್ಲ. ಪ್ರದೇಶಕ್ಕೆ ಪ್ರತಿನಿತ್ಯ ನಾನಾ ಊರುಗಳಿಂದ ನೇಕ ಜನರು ಬಂದು ಹೋಗುತ್ತಿದ್ದರೂ ಕ್ಯಾಮೆರಾಗಳು ವರ ಮೇಲೆ ಕಣ್ಣಿಡುತ್ತಿಲ್ಲ.

    ಕಾರ್ಕಳ ನಗರದಲ್ಲಿ ಸಿಸಿ ಕ್ಯಾಮರಾ ಇಲ್ಲದ ಪರಿಣಾಮ ಅಪರಾಧ, ಅಪಘಾತ ಘಟನೆ ನಡೆದ ಸಂದರ್ಭ ಪೊಲೀಸರು ಖಾಸಗಿ ಅಂಗಡಿಗಳ ಸಿಸಿ ಕ್ಯಾಮೆರಾಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಕೆಲವೊಂದು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಅವು ಕುರುಡಾಗಿವೆ. ಇಡೀ ನಗರಕ್ಕೆ ಹೋಲಿಸಿದರೆ ಕಾರ್ಕಳದಲ್ಲಿ ಸಿಸಿ ಕ್ಯಾಮೆರಾ ಸಂಖ್ಯೆ ಕಡಿಮೆ. ಸಾರ್ವಜನಿಕರ ಸಹಕಾರದ ಮೇಲೆ ಮಾತ್ರ ಅಪರಾಧ ತಡೆ ಅವಲಂಬಿತವಾಗಿದೆ.

    ಪುರಸಭೆ ವ್ಯಾಪ್ತಿಯ ಮೂರು ಮಾರ್ಗ, ಬಂಗ್ಲೆಗುಡ್ಡೆ, ಪುಲ್ಕೇರಿ ಮೊದಲಾದ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಖ್ಯ ಪೇಟೆಯ ಹೊರ ವಲಯದಲ್ಲಿ ಹಾದು ಹೋಗುವ ಬೈಪಾಸ್ ರಸ್ತೆ, ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲ. ಪೇಟೆಯ ಒಳಗಡೆ ಕೆಲವೆಡೆ ಸಿಸಿ ಕ್ಯಾಮೆರಾ ಇದ್ದರೂ ಕೆಲವು ಮಾತ್ರ ಕಾರ್ಯಾಚರಿಸುತ್ತವೆ. ಹೀಗಾಗಿ ನಗರಕ್ಕೆ ಇನ್ನಷ್ಟು ಸಿಸಿ ಕ್ಯಾಮೆರಾ ಅಳವಡಿಕೆ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.

    ಪುರಸಭೆ ವ್ಯಾಪ್ತಿಯಲ್ಲಿ 4 ಸಿಸಿ ಕ್ಯಾಮೆರಾ, ಡಿವೈಎಸ್ಪಿ ವಿಭಾಗದಲ್ಲಿ ಒಟ್ಟು 8 ಸಿಸಿ ಕ್ಯಾಮೆರಾಗಳಿವೆ. ನಗರ, ಗ್ರಾಮಾಂತರ ಭಾಗಗಳಲ್ಲಿ ನಿತ್ಯವೂ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಕ್ಯಾಮೆರಾಗಳ ಅಳವಡಿಕೆಯಿಂದ ಅಪರಾಧ ಕೃತ್ಯ, ಅಕ್ರಮ ಚಟುವಟಿಕೆ, ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಗಾವಲು ಇರಿಸಲು ಪೊಲೀಸರಿಗೆ ಅನುಕೂಲವಾಗುತ್ತದೆ.

    ಎಲ್ಲಿ ಅವಶ್ಯಕ?

    ನಗರ ಭಾಗದ ಬೈಪಾಸ್ ರಸ್ತೆಯ ಸರ್ವಜ್ಞ ವೃತ್ತ, ಜೋಡು ರಸ್ತೆಯ ರಾಘವೇಂದ್ರ ವೃತ್ತದ ಬಳಿ, ಅಂಬೇಡ್ಕರ್ ವೃತ್ತ (ಗಣಪತಿ ದೇವಸ್ಥಾನದ ಬಳಿ), ಅನಂತಶಯನ, ಬಸ್ ನಿಲ್ದಾಣ, ಆನೆಕೆರೆ, ಬಾಹುಬಲಿ ಬೆಟ್ಟ ಮೊದಲಾದ ಪ್ರಮುಖ ಕೇಂದ್ರಗಳಲ್ಲಿ ಸಿಸಿ ಕಣ್ಗಾವಲಿನ ಅವಶ್ಯಕತೆಯಿದ್ದು,ಜತೆಗೆ ಗ್ರಾಮೀಣ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಬೆಳ್ಮಣ್, ಬಜಗೋಳಿಗಳಲ್ಲಿಯೂ ಅಗತ್ಯವಿದೆ. ಬೆಳ್ಮಣ್ ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮರಾ ಇದ್ದರೂ ಕಾರ್ಯಾಚರಿಸುತ್ತಿಲ್ಲ. ಹೀಗಾಗಿ ಈ ಭಾಗದಲ್ಲಿ ಅಪರಾಧ ಕೃತ್ಯ ನಡೆದ ಸಂದರ್ಭ ಚಲನವಲನ ಪರಿಶೀಲಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

    ಖಾಸಗಿ ಕ್ಯಾಮೆರಾ ಮೊರೆ

    ಅಪರಾಧ ಹಾಗೂ ಅಪಘಾತ ಕೃತ್ಯಗಳು ನಡೆದಾಗ ಪೊಲೀಸರು ಬ್ಯಾಂಕ್, ಹೊಟೇಲ್, ವಾಣಿಜ್ಯ ಮತ್ತು ವಾಣಿಜ್ಯೇತರ ಅಂಗಡಿಗಳ ಸಿಸಿ ಕ್ಯಾಮೆರಾದ ಮೊರೆ ಹೋಗುವುದು ಅನಿವಾರ್ಯ. ಇವುಗಳ ಜತೆ ಅಂತಾರಾಜ್ಯ ಕಳ್ಳತನ, ಗೋ ಕಳ್ಳತನ, ಮನೆಗಳ್ಳತನ, ಸರಗಳ್ಳತನ, ವಾಹನ ಕಳ್ಳತನ ಇವೆೆಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಾಗ ಸುಳಿವು ಇಲ್ಲದೆ ಕೈಚೆಲ್ಲಬೇಕಾಗುತ್ತದೆ.

    ಖಾಸಗಿಯವರ ಮನವೊಲಿಕೆ

    ರಸ್ತೆ ನಿಯಮ ಉಲ್ಲಂಘನೆ, ವಾಹನ ದಟ್ಟಣೆ ನಿಯಂತ್ರಣ, ಅಪರಾಧ ಪ್ರಕರಣ ಪತ್ತೆಗೆ ಸಿಸಿ ಕ್ಯಾಮೆರಾಗಳು ಸಾಕಷ್ಟು ಕಡೆ ಇಲ್ಲದಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ. ಸಾರ್ವಜನಿಕ ಜನಸಂದಣಿ ಸ್ಥಳಗಳಲ್ಲಿ ಅಕ್ರಮ, ಅಪರಾಧ ತಡೆಗೂ ಸಿಸಿ ಕ್ಯಾಮೆರಾ ವ್ಯವಸ್ಥೆಗಳಿಲ್ಲ. ಪೊಲೀಸರೇ ಖಾಸಗಿಯಾಗಿ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಪೊಲೀಸ್ ಇಲಾಖೆಗೂ ಲಾಭವಿದೆ.

    ಬೆಳೆಯುತ್ತಿರುವ ನಗರ ಹಾಗೂ ಗ್ರಾಮೀಣ ಭಾಗದ ಅಪರಾಧ ತಡೆಗೆ ಅಲ್ಲಲ್ಲಿ ಸಿಸಿ ಕ್ಯಾಮೆರಾ ಇದ್ದರೆ ಉತ್ತಮ. ಇದರಿಂದ ಪೊಲೀಸರಿಗೂ ಅನುಕೂಲವಾಗುತ್ತದೆ. ಸಾರ್ವಜನಿಕರಿಗೂ ಭದ್ರತೆಯ ಭಾವ ಬರುತ್ತದೆ. ಹೀಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಕಣ್ಗಾವಲು ಕಡ್ಡಾಯವಾಗಬೇಕು.

    -ಕಿಶೋರ್ ಕುಮಾರ್, ನಾಗರಿಕ

    ಸಾರ್ವಜನಿಕ ಸ್ಥಳಗಳಲ್ಲಿ ಅವಶ್ಯವಿದ್ದಷ್ಟು ಸಿಸಿ ಕ್ಯಾಮೆರಾ ಅಳವಡಿಕೆ ಆಗಿಲ್ಲ ಎನ್ನುವುದು ನಿಜ. ಎಲ್ಲ ಸಮಯದಲ್ಲೂ ಅಪರಾಧ ತಡೆಗೆ ಸಿಸಿ ಕ್ಯಾಮೆರಾ ಅವಶ್ಯವಿರುವುದರಿಂದ ಸಾರ್ವಜನಿಕರು ತಮ್ಮ ಕಚೇರಿ, ಕಟ್ಟಡಗಳಲ್ಲಿ ಅಳವಡಿಸಿಕೊಂಡು ಸಹಕರಿಸಬೇಕು.

    -ಟಿ.ಡಿ ನಾಗರಾಜ್, ವೃತ್ತ ನಿರೀಕ್ಷಕರು ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts