More

    ಧಾರ್ಮಿಕ ಪ್ರವಾಸೋದ್ಯಮಕ್ಕೆ ದಾರಿ

    -ಹೇಮನಾಥ್ ಪಡುಬಿದ್ರಿ

    ಅಷ್ಟಮಠಗಳಲ್ಲಿ ನಾಲ್ಕು ಮಠಗಳನ್ನು ಹೊಂದಿರುವ ಕಾಪು ವಿಧಾನಸಭಾ ಕ್ಷೇತ್ರ ಒಂದೆಡೆ ಕಡಲತೀರ ಇನ್ನೊಂದೆಡೆ ಮಲೆನಾಡ ತಪ್ಪಲಿನವರೆಗೆ ಚಾಚಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದರೂ, ಅಪೂರ್ಣವಾಗಿರುವ ಯೋಜನೆ ಗುರಿ ಮುಟ್ಟಿಸುವುದರೊಂದಿಗೆ ಇನ್ನಷ್ಟು ಅಭಿವೃದ್ಧಿ ಪರ ಯೋಜನೆ ರೂಪಿಸಿ ಕಾರ್ಯಗತ ಮಾಡುವ ಮಹತ್ತರ ಜವಾಬ್ದಾರಿ ನೂತನ ಶಾಸಕರ ಮೇಲಿದೆ.

    ದ.ಕ.-ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಕಾಪು ವಿಧಾನಸಭಾ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಿಂದ ಉದ್ಯಾವರದವರೆಗೆ ಹಾಗೂ ಪೆರ್ಡೂರು ಕುಕ್ಕೆಹಳ್ಳಿಯವರೆಗೆ ಚಾಚಿಕೊಂಡಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು, ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಡಲತೀರ ಪ್ರವಾಸೋದ್ಯಮದೊಂದಿಗೆ ಧಾರ್ಮಿಕ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಪ್ರವಾಸಿ ತಾಣಗಳಾಗಿರುವ ಕಡಲ ತೀರ ಸಂಪರ್ಕಕ್ಕೆ ಸೂಕ್ತ ರಸ್ತೆ ನಿರ್ಮಾಣವಾಗಬೇಕು. ತಾಲೂಕು ಆಸ್ಪತ್ರೆ ಮೇಲ್ದರ್ಜೆಗೇರಬೇಕು ಎಂಬ ಕೂಗು ಕ್ಷೇತ್ರದ ಜನತೆಯದ್ದು.

    ಬೀಚ್, ಧಾರ್ಮಿಕ ಪ್ರವಾಸಿತಾಣ

    ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಾಪು ಲೈಟ್ ಹೌಸ್, ಪಡುಬಿದ್ರಿ ಬೀಚ್, ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್ ಪ್ರವಾಸಿ ತಾಣಗಳಾಗಿವೆ. ಅದಲ್ಲದೆ ಧಾರ್ಮಿಕ ಕ್ಷೇತ್ರದಲ್ಲೂ ಪಾಜಕ ಕ್ಷೇತ್ರ, ಸಿರಿ ಜಾತ್ರೆಯ ಹಿರಿಯಡಕದ ಶ್ರೀವೀರಭದ್ರ ಸ್ವಾಮಿ ದೇವಸ್ಥಾನ, ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನ, ಕಾಪು ಮಾರಿಗುಡಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳೂ ಸೇರಿವೆ. ಉಡುಪಿ ಅಷ್ಟಮಠಗಳಲ್ಲಿ ಪಲಿಮಾರು, ಅದಮಾರು, ಶೀರೂರು, ಪುತ್ತಿಗೆ ಮಠಗಳ ಜತೆಗೆ ಪಾಜಕ ಕ್ಷೇತ್ರ ಈ ಕ್ಷೇತ್ರದಲ್ಲಿರುವುದು ವಿಶೇಷವಾಗಿದ್ದು. ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಅಭಿವೃದ್ಧಿ ಆಗಬೇಕಿದೆ.

    ಕುಡಿಯುವ ನೀರಿನ ಸಮಸ್ಯೆ

    ಶಂಕರಪುರ ಮಲ್ಲಿಗೆ, ಮಟ್ಟುಗುಳ್ಳ ಕ್ಷೇತ್ರದ ವಿಶೇಷ ಬೆಳೆಗಳು. ಭತ್ತ, ತೆಂಗು ಇತರ ಪ್ರಮುಖ ಬೆಳೆಗಳು. ಕೃಷಿ ಸಮಸ್ಯೆಗಳ ಪರಿಹಾರ ಜತೆಗೆ ಕಾಪುವಿನ ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳಾರಂಭದಲ್ಲಿಯೇ ಕಾಡುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಿದೆ. ಹೈನುಗಾರಿಕೆ ಜೀವನಾಧಾರವಾಗಿರುವ ಕ್ಷೇತ್ರದ ಪಶು ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿಯಾಗಬೇಕಿದೆ.

    ಆರೋಗ್ಯ, ಶಿಕ್ಷಣ ಯೋಜನೆ

    ಕಾಪು ತಾಲೂಕಾದರೂ ಕೇಂದ್ರ ಸ್ಥಾನದಲ್ಲಿ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇದೆ. ಕನಿಷ್ಠ 100 ಬೆಡ್‌ಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕು. ಬೆಳಪುವಿನ ವಿಜ್ಞಾನ ಸಂಶೋಧನಾ ಕೇಂದ್ರ ಕಾಮಗಾರಿ ಕುಂಟುತ್ತಾ ಸಾಗಿದ್ದು, ಶೀಘ್ರ ಪೂರ್ಣಗೊಳಿಸುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಕಾಪು ಪ್ರಾಧಿಕಾರ ಸಮಸ್ಯೆಗೆ ಪರಿಹಾರ, ತಾಲೂಕು ಕ್ರೀಡಾಂಗಣ ನಿರ್ಮಾಣ, ಅಗ್ನಿಶಾಮಕ ಠಾಣೆ, ನಿವೇಶನ ರಹಿತರಿಗೆ ಮನೆ ನಿವೇಶನ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸುವುದಲ್ಲದೆ ಬಹು ನಿರೀಕ್ಷಿತ ಹೆಜಮಾಡಿ ಬಂದರು ಕಾಮಗಾರಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಶಾಸಕರು ಗಮನಹರಿಸಬೇಕಿದೆ.

    ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಒತ್ತು

    ಅದಾನಿ ಸಮೂಹ ಸಂಸ್ಥೆಯ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯುಪಿಸಿಎಲ್ ಘಟಕ, ಕಾಪುವಿನ ಪಾದೂರಿನಲ್ಲಿರುವ ಕಚ್ಚಾ ತೈಲ ಸಂಗ್ರಹಣಾ ಘಟಕ ಐಎಸ್‌ಪಿಆರ್‌ಎಲ್, ಪವನ ವಿದ್ಯುತ್ ಸ್ಥಾವರದ ಬಿಡಿಭಾಗ ತಯಾರಿಕಾ ಘಟಕ ಸುಜ್ಲಾನ್ ಕಂಪನಿ, ನಂದಿಕೂರು ಮತ್ತು ಬೆಳಪುವಿನಲ್ಲಿರುವ ಎರಡು ಕೈಗಾರಿಕಾ ಪಾರ್ಕ್ ಕಾಪು ಕ್ಷೇತ್ರದಲ್ಲಿವೆ. ಆದರೆ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂಬ ಕೂಗು ನಿರಂತರ. ಈ ಸಂಬಂಧ ಕ್ರಮವಾಗಬೇಕು ಎಂಬ ಬೇಡಿಕೆ ಇದೆ.

    ರೈತರು ಬೆಳೆದ ಬೆಳೆಗೆ ಲಾಭದಾಯಕ ಬೆಂಬಲ ಬೆಲೆ, ನೀರಿನ ಸಮಸ್ಯೆ ಪರಿಹಾರಕ್ಕೆ ಕಿಂಡಿಅಣೆಕಟ್ಟುಗಳ ನಿರ್ಮಾಣಕ್ಕೆ ಒತ್ತು, ಕೃಷಿಗೆ ಕಾರ್ಮಿಕರು ಸಿಗುವಂತೆ ಕಾರ್ಮಿಕ ಕೇಂದ್ರಗಳ ಸ್ಥಾಪನೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು, ಮಲ್ಲಿಗೆ ಮತ್ತು ಮಟ್ಟುಗುಳ್ಳ ಬೆಳೆ ರೋಗ ಕೀಟಗಳ ಬಗ್ಗೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕು.

    -ರಾಮಕೃಷ್ಣ ಶರ್ಮ, ಬಂಟಕಲ್ಲು, ಕೃಷಿಕ

    ಶಾಸಕರಾಗಿದ್ದ ಲಾಲಾಜಿ ಆರ್.ಮೆಂಡನ್ ಅವರ ಮುಂದುವರಿದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಹಲವಾರು ಯೋಜನೆಗಳ ಮೂಲಕ ಕಾಪುವನ್ನು ಸಾಮಾಜಿಕ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಕ್ಷೇತ್ರವನ್ನು ಮೇಲಕೆತ್ತುವ ಕೆಲಸ ಮಾಡುತ್ತೇನೆ. ಉತ್ತಮ ಪ್ರಾಕೃತಿಕ ಸಂಪದ್ಭರಿತವಾದ ಕ್ಷೇತ್ರವಾಗಿರುವ ಕಾಪುವಿನಲ್ಲಿ ಹಲವಾರು ಧಾರ್ಮಿಕ ಕೇಂದ್ರಗಳಿವೆ. ಟೆಂಪಲ್ ಟೂರಿಸಂಗೆ ಅನುಕೂಲಕರವಾಗಿ ಯೋಜನೆ ರೂಪಿಸಲಾಗುವುದು.

    -ಗುರ್ಮೆ ಸುರೇಶ್ ಶೆಟ್ಟಿ, ನೂತನ ಶಾಸಕರು, ಕಾಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts