More

    ಕಣಜಾರಿನಲ್ಲಿ ರಫೇಲ್ ವಿಮಾನ!

    -ಹರಿಪ್ರಸಾದ್ ನಂದಳಿಕೆ, ಕಾರ್ಕಳ

    ಕಣಜಾರು ಲೂರ್ಡ್ಸ್ ಶಾಲೆಯ ಆಸುಪಾಸು ಸಾಗುವರಿಗೆ ಶಾಲಾ ಮೈದಾನದಲ್ಲಿ ರಫೇಲ್ ವಿಮಾನ ಕಂಡು ಅಚ್ಚರಿಯಾಗಬಹುದು. ಯುದ್ಧ ವಿಮಾನಕ್ಕೆ ಶಾಲಾ ಮೈದಾನದಲ್ಲಿ ಏನು ಕೆಲಸ ಎಂದು ಗೊಂದಲವಾಗಬಹುದು. ಆದರೆ ಹತ್ತಿರ ತೆರಳಿ ನೋಡಿದರೆ ಗೊತ್ತಾಗುತ್ತದೆ. ಇದು ವಿಮಾನವಲ್ಲ, ರಫೇಲ್ ಮಾದರಿಯಲ್ಲಿ ನಿರ್ಮಿಸಲಾದ ಜಾರು ಬಂಡಿ ಎಂದು.

    ಕಾರ್ಕಳ ತಾಲೂಕಿನ ಬೈಲೂರು ಸಮೀಪ ಕಣಜಾರು ಲೂರ್ಡ್ಸ್ ಚರ್ಚ್ ಪಕ್ಕದಲ್ಲೇ ಚರ್ಚ್‌ನ ಆಡಳಿತದ ಐಸಿಎಸ್‌ಇ ಬೋರ್ಡ್ ಮಾನ್ಯತೆ ಪಡೆದ ಲೂರ್ಡ್ಸ್ ಆಂಗ್ಲಮಾಧ್ಯಮ ಶಾಲೆ ಮೈದಾನದಲ್ಲಿ ಈ ಜಾರುಬಂಡಿ ಇದೆ. ದೂರದಿಂದ ನೋಡಿದಾಗ ಫೈಟರ್ ಜೆಟ್ ರಫೇಲ್‌ನಂತೆ ಕಂಡರೂ ಇದು ಮಕ್ಕಳ ಆಟಕ್ಕೆ ಮೀಸಲಾದ ಜಾರು ಬಂಡಿಯಾಗಿದೆ. ತಾಲೂಕಿನಲ್ಲಿ ಐಸಿಎಸ್‌ಇ ಮಾನ್ಯತೆ ಪಡೆದ ಏಕಮಾತ್ರ ಶಾಲೆಯಿದು. 10ನೇ ತರಗತಿ ತನಕ ಇದ್ದು, ವಿದ್ಯಾರ್ಥಿಗಳ ಆಟೋಟಕ್ಕೂ ಮಹತ್ವ ನೀಡಲಾಗುತ್ತದೆ. ಅದಕ್ಕಾಗಿ ನಿರ್ಮಿಸಿದ ಜಾರುಬಂಡಿ ಮಕ್ಕಳಿಗೆ ಪ್ರಿಯವಾಗಿದೆ.

    ಜಾರುಬಂಡಿಗೆ ರಫೇಲ್ ವಿಮಾನದಂತೆ ಬಣ್ಣ ಬಳಿಯಲಾಗಿದೆ. ಹೊರ ಒಳಗಿನ ವಿನ್ಯಾಸ ಮೂಲ ವಿಮಾನವನ್ನೇ ಹೋಲುತ್ತಿದೆ. ಹಾಗಾಗಿ ಶಾಲೆ ಅಂಗಳಕ್ಕೆ ಕಾಲಿಟ್ಟ ತಕ್ಷಣ ವಿಮಾನವೇ ನಿಂತಿದೆಯೇನೊ ಎಂಬಂತೆ ಭಾಸವಾಗುತ್ತದೆ. ಇದರಲ್ಲಿ ನಿರ್ಮಿಸಲಾಗಿರುವ ಮೆಟ್ಟಿಲು ಮೂಲಕ ವಿಮಾನದೊಳಕ್ಕೆ ಒಂದು ಕಡೆಯಿಂದ ಹತ್ತಿ ಇನ್ನೊಂದು ಭಾಗದಲ್ಲಿ ಜಾರಿ ಕೆಳಗೆ ಬರುವಂತಹ ವ್ಯವಸ್ಥೆಯಿದೆ. ಒಂದು ಬಾರಿಗೆ 15 ಮಕ್ಕಳು ಮಾದರಿ ವಿಮಾನದೊಳಗೆ ಹೋಗಬಹುದು. ಮಕ್ಕಳಿಗೆ ಪಠ್ಯದ ಬಿಡುವಿನಲ್ಲಿ ಪಠ್ಯೇತರ ಚಟುವಟಿಕೆಗೆ ಅನುಕೂಲವಾಗುವಂತೆ ಮಕ್ಕಳನ್ನು ಸೆಳೆಯಲು ಜೆಟ್ ಜಾರುಬಂಡಿ ನಿರ್ಮಿಸಲಾಗಿದ್ದು, ಆಟದ ಸಮಯದಲ್ಲಿ ಇಲ್ಲಿ ಜಾರಿ ಮಕ್ಕಳು ಸಂಭ್ರಮಿಸುತ್ತಾರೆ. ವಿಮಾನ ನೋಡುಗರ ವಿದ್ಯಾರ್ಥಿಗಳ ಕುತೂಹಲಕ್ಕೆ ಕಾರಣವಾಗಿದೆ.

    ದಾನಿಗಳ ನೆರವಿನ ಯೋಜನೆ

    ಕುವೈತ್‌ನ ಉದ್ಯಮಿ ಲಾರೆನ್ಸ್ ಸೈಡಾನಾ ಎಂಬುವರು ಮಕ್ಕಳ ಪಠ್ಯೇತರ ಚಟುವಟಿಕೆಗೆ ಅನುಕೂಲವಾಗುವಂತೆ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದಾರೆ. ಜತೆಗೆ ಮೈದಾನದಲ್ಲಿ ಆನೆ, ಜಿರಾಫೆ, ಎತ್ತಿನ ಗಾಡಿ ಹೀಗೆ ವಿವಿಧ ಪ್ರತಿಕೃತಿಗಳನ್ನು ಮಕ್ಕಳಿಗಾಗಿ ಚರ್ಚ್ ಸಹಕಾರದಿಂದ ನಿರ್ಮಿಸಿದ್ದಾರೆ. ನಿರ್ಮಾಣ ಕಾರ್ಯದಲ್ಲಿ ಊರಿನವರು, ಶಿಕ್ಷಕರು, ಮಕ್ಕಳ ಪೋಷಕರು ಕೈಜೋಡಿಸಿದ್ದಾರೆ.

    ಮಕ್ಕಳಿಗೆ ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ. ಹೀಗಾಗಿ ಆಟದ ಮೈದಾನದಲ್ಲಿ ದಾನಿಗಳ ನೆರವಿನಿಂದ ವಿಮಾನ ಮಾದರಿಯ ಜಾರು ಬಂಡಿ ನಿರ್ಮಿಸಲಾಗಿದೆ. ಮಕ್ಕಳು ಏರಿ ಸಂಭ್ರಮಿಸುತ್ತಿದ್ದಾರೆ.
    -ವಿಶಾಲ್ ಲೋಬೊ, ಧರ್ಮಗುರು, ಲೂರ್ಡ್ಸ್ ಚರ್ಚ್ ಕಣಜಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts