

ನವದೆಹಲಿ: ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಸ್ಟಾರ್ ಆಟಗಾರರ ಜತೆ ಆಡಿದ್ದಾರೆ. ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಕೆಲವು ಅತ್ಯುತ್ತಮ ಕ್ರಿಕೆಟಿಗರೊಂದಿಗೆ ಬ್ಯಾಟಿಂಗ್ಗೆ ಇಳಿದು ರನ್ಗಳ ಸುರಿಮಳೆಗೈದಿದ್ದಾರೆ.
ಸಚಿನ್ ಮತ್ತು ಕೊಹ್ಲಿ ಮಾತ್ರವಲ್ಲ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ ಸೇರಿದಂತೆ ಹಲವು ಟಾಪ್ ಬ್ಯಾಟ್ಸ್ಮನ್ಗಳ ಜೊತೆ ಯುವಿ ಆಡಿದ್ದಾರೆ. ಆದರೆ. ಅವರೆಲ್ಲರಿಗಿಂತ ಮತ್ತೊಬ್ಬ ಬ್ಯಾಟರ್ ಜತೆ ಆಡುವುದೆಂದರೆ ತನಗೆ ತುಂಬಾ ಇಷ್ಟ ಎನ್ನುತ್ತಾರೆ ಯುವರಾಜ್. ಧೋನಿ ಮತ್ತು ಕೊಹ್ಲಿಗಿಂತ ಆತನೇ ಉತ್ತಮ ಮತ್ತು ಆತನನ್ನು ಸೋಲಿಸುವವರು ಯಾರೂ ಇಲ್ಲ ಎಂದಿದ್ದಾರೆ. ಹಾಗಾದರೆ ಲೆಜೆಂಡರಿ ಕ್ರಿಕೆಟಿಗ ಯುವಿ ಇಷ್ಟಪಟ್ಟ ಆ ಬ್ಯಾಟರ್ ಯಾರು ಎಂಬುದನ್ನು ನಾವೀಗ ನೋಡೋಣ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ನನ್ನ ನೆಚ್ಚಿನ ಬ್ಯಾಟರ್ ಎಂದು ಯುವರಾಜ್ ಬಹಿರಂಗಪಡಿಸಿದ್ದಾರೆ. ಅವರ ಆಟಕ್ಕೆ ನಾನೊಬ್ಬ ದೊಡ್ಡ ಅಭಿಮಾನಿ. ರೋಹಿತ್ ಆಟ ನೋಡುವುದೇ ಒಂದು ಸೊಗಸು. ಬ್ಯಾಟಿಂಗ್ನಲ್ಲಿ ಹಿಟ್ಮ್ಯಾನ್ರನ್ನು ಮೀರಿಸುವವರು ಯಾರೂ ಇಲ್ಲ. ರೋಹಿತ್ ಅವರ ಬ್ಯಾಟಿಂಗ್ ಅನ್ನು ಜೀವನ ಪರ್ಯಂತ ವೀಕ್ಷಿಸಲು ಬಯಸುತ್ತೇನೆ ಎಂದು ಕ್ರೀಡಾ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
2011ರ ಏಕದಿನ ವಿಶ್ವಕಪ್ಗೆ ರೋಹಿತ್ ಆಯ್ಕೆಯಾಗಿರಲಿಲ್ಲ. ಇದರಿಂದ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅಧಿಕ ತೂಕ, ಫಿಟ್ನೆಸ್ ಸಮಸ್ಯೆ ಹಾಗೂ ಬ್ಯಾಟಿಂಗ್ ವೈಫಲ್ಯ ಒಂದೆಡೆಯಾದರೆ, ಇನ್ನೊಂದೆಡೆ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದೇ ಬೇಸತ್ತಿದ್ದರು. ಈ ವೇಳೆ ರೋಹಿತ್ ಬೆಂಬಲಕ್ಕೆ ನಿಂತಿದ್ದು ಯುವರಾಜ್ ಸಿಂಗ್. ರೋಹಿತ್ಗೆ ತನ್ನ ಪ್ರತಿಭೆಯನ್ನು ನೆನಪಿಸಿದರು.
ವೃತ್ತಿಜೀವನದಲ್ಲಿ ಬೆಳೆಯಲು ಫಿಟ್ನೆಸ್ ಮತ್ತು ಬ್ಯಾಟಿಂಗ್ ತಂತ್ರದಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಯುವಿ ಸಲಹೆ ನೀಡಿದರು. ಊಟಕ್ಕೆ ಕರೆದುಕೊಂಡು ಹೋಗಿ ರೋಹಿತ್ಗೆ ಉತ್ತಮ ಸಲಹೆಗಳನ್ನು ನೀಡಿದ್ದರು. ಇದಾದ ಬಳಿಕ ಹಿಟ್ಮ್ಯಾನ್ ತನ್ನ ವೃತ್ತಿಜೀವನದ ಮೇಲೆ ಗಮನವನ್ನು ಹೆಚ್ಚಿಸಿದರು. ನಂತರ ಹಿಂತಿರುಗಿ ನೋಡಲೇ ಇಲ್ಲ. ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದಿದ್ದು ರೋಹಿತ್ ವೃತ್ತಿ ಜೀವನದ ಐತಿಹಾಸಿಕ ಸಾಧನೆಯಾಗಿದೆ. (ಏಜೆನ್ಸೀಸ್)