

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಾದೂರು ಐಎಸ್‌ಪಿಆರ್‌ಎಲ್ ಯೋಜನಾ ಪ್ರದೇಶದಲ್ಲಿ ಜಲ್ಲಿ ಕ್ರಷರ್ ನಿರ್ಮಾಣ ವಿರೋಧಿಸಿ ಮಜೂರು ಗ್ರಾಪಂ ವತಿಯಿಂದ ನಿರ್ಣಯ ಕೈಗೊಳ್ಳಲಾಯಿತು. ಜಲ್ಲಿ ಕ್ರಷರ್ ನಿರ್ಮಾಣ ಸಂಬಂಧ ಜಲಂಚಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷತೆಯಲ್ಲಿ ಸೋಮವಾರ ವಿಶೇಷ ಗ್ರಾಮ ಸಭೆಯಲ್ಲಿ ನಿರ್ಣಯಕ್ಕೆ ಸರ್ವಾನುಮತಿಯಿಂದ ಸಮ್ಮತಿ ಸೂಚಿಸಲಾಯಿತು.
ಗ್ರಾಮಸ್ಥರು ಈ ಕುರಿತು ಪ್ರತಿಕ್ರಿಯಿಸಿದ್ದು, ಕ್ರಷರ್ ನಿರ್ಮಾಣದಿಂದ ಪರಿಸಕ್ಕೆ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಈ ಪ್ರದೇಶದಲ್ಲಿ ಜಲ್ಲಿ ಕ್ರಷರ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ರಿಚರ್ಡ್ ಕೊರ್ಡಾ, ಪ್ರಸನ್ನ, ಶಂಕರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ರವಿರಾಜ್ ಶೆಟ್ಟಿ ಅಹವಾಲು ಸಲ್ಲಿಸಿದರು. ಮಾರ್ಗದರ್ಶಿ ಅಧಿಕಾರಿ ಡಾ. ಅರುಣ್ ಹೆಗ್ಡೆ, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಪಿಡಿಒ ವಿಲಾಸಿನಿ, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಎಎಸ್‌ಐ ನಾರಾಯಣ್, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಸಂದೀಪ್ ರಾವ್ ಪ್ರಸ್ತಾವನೆಗೈದರು. ಪ್ರಸಾದ್ ಭಂಡಾರಿ ನಿರೂಪಿಸಿದರು.
ಕಾಪು ಕ್ಷೇತ್ರದಲ್ಲಿ ಯಾವುದೇ ಜನವಿರೋಧಿ ಯೋಜನೆಗೆ ಅವಕಾಶ ನೀಡುವುದಿಲ.್ಲ ಯೋಜನೆ ವಿರುದ್ಧ ಜನರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತೇನೆೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು. ಕ್ರಷರ್ ನಿರ್ಮಾಣಕ್ಕೆ ಅವಕಾಶ ನೀಡದಂತೆ ಸಭೆಯಲ್ಲಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.
ಬೆಂಗಳೂರಿನ ಲಕ್ಷ್ಮೀ ಟ್ರಾವೆಲ್ಸ್ ಕಂಪನಿ ಕ್ರಷರ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಸ್ಥಳೀಯರ ವಿರೋಧವನ್ನೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.-ಅಶ್ವಿನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ