

Asia Cup: ಪಾಕಿಸ್ತಾನದೊಂದಿಗೆ ಭಾರತ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸುವುದಿಲ್ಲ, ಆದರೆ ಮುಂಬರುವ ಬಹು-ರಾಷ್ಟ್ರಗಳ ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಕ್ರೀಡಾ ಸಚಿವಾಲಯ ಗುರುವಾರ (ಆಗಸ್ಟ್ 21) ತಿಳಿಸಿರುವುದಾಗಿ ವರದಿಯಾಗಿದೆ.
ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ನಿಲುವಿಗೆ ಬದ್ಧವಾಗಿದ್ದು, ಈ ನಿರ್ಬಂಧವು ವಿಶ್ವಕಪ್‌ಗಳು ಮತ್ತು ಒಲಿಂಪಿಕ್ಸ್‌ನಂತಹ ಬಹುಪಕ್ಷೀಯ ಪಂದ್ಯಾವಳಿಗಳಿಗೆ ವಿಸ್ತರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನಾಳೆಯಿಂದ ರಸ್ತೆಗಾಗಿ ಉಪವಾಸ ಸತ್ಯಾಗ್ರಹ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದರಿಂದ ಭಾರತಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸಚಿವಾಲಯವೂ ತಿಳಿಸಿದ್ದು, ಏಷ್ಯಾಕಪ್‌ನಲ್ಲಿ ಪೂರ್ವ ನಿಗದಿಯಂತೆ ಪಂದ್ಯಗಳು ನಡೆಯಲಿವೆ ಎನ್ನುವುದನ್ನು ದೃಢಪಡಿಸಿದೆ.
2012–13ರ ಋತುವಿನ ನಂತರ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿಲ್ಲ. ಅಂದಿನಿಂದ, ಎರಡೂ ದೇಶಗಳ ಪುರುಷ ಮತ್ತು ಮಹಿಳಾ ತಂಡಗಳು ಬಹು-ರಾಷ್ಟ್ರಗಳ ಪಂದ್ಯಾವಳಿಗಳು ಮತ್ತು ಬಹು-ಕ್ರೀಡಾಕೂಟಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗಿವೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತ 2023 ರಲ್ಲಿ ಏಷ್ಯಾಕಪ್ ಮತ್ತು 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಈ ಪಂದ್ಯಾವಳಿಗಳನ್ನು ನಂತರ ತಟಸ್ಥ ಸ್ಥಳಗಳಲ್ಲಿ ನಡೆಸಲಾಯಿತು. ಇತ್ತೀಚೆಗೆ, ಪಾಕಿಸ್ತಾನದ ಹಾಕಿ ತಂಡವು ಸೆಪ್ಟೆಂಬರ್ 28 ರಂದು ರಾಜ್‌ಗಿರ್‌ನಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್ ಹಾಕಿಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ.(ಏಜೆನ್ಸೀಸ್)