

ಮದ್ದೂರು: ಪಟ್ಟಣವನ್ನು ಬಿಎಂಐಸಿಯಿಂದ ಕೈಬಿಡಲು ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ತಾಲೂಕಿನ ಕುದರಗುಂಡಿ ಗ್ರಾಮದ ಬಳಿ ಕುದರಗುಂಡಿ ಕಾಲನಿ, ವಳೆಗೆರೆಹಳ್ಳಿ, ಗೆಜ್ಜಲಗೆರೆ, ಗೆಜ್ಜಲಗೆರೆ ಕಾಲನಿವರೆಗೆ 3 ಕಿ. ಮೀ ವರೆಗಿನ 3.75 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ದಶಕಗಳ ಹಿಂದೆಯೇ ಮದ್ದೂರು ಪಟ್ಟಣವನ್ನು ಬಿಎಂಐಸಿ ವ್ಯಾಪ್ತಿಗೆ ಸೇರಿಸಲಾಗಿದೆ. ಅದರಿಂದಾಗಿ ಪಟ್ಟಣದ ಅಭಿವೃದ್ಧಿಗೆ ತೊಡಕಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ವರ್ಷಗಳಿಂದ ಅಹವಾಲು ಕೇಳಿಬರುತ್ತಿದೆ. ಈ ಬಗ್ಗೆ ನೆನ್ನೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಿಚಾರ ಮಂಡನೆ ಮಾಡಿ ಸದನದ ಗಮನಕ್ಕೆ ತರಲಾಗಿ ಕೆಆರ್‌ಡಿಎಲ್, ಪಿಡಬ್ಲುೃಡಿ, ಬಿಎಂಐಸಿ ಸೇರಿದಂತೆ ಮೂರು ಇಲಾಖೆಗಳೊಂದಿಗೆ ಚರ್ಚೆ ನಡೆಸಿ ಸುಪ್ರೀಂಕೋರ್ಟ್‌ಗೆ ಕೈಬಿಡಲು ಮನವಿ ಸಲ್ಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಂತೆ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಈ ಬಗ್ಗೆ ಆದಷ್ಟು ಬೇಗ ಸಂಬಂಧಪಟ್ಟ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿ ಬಿಎಂಐಸಿ ತೆರವಿಗೆ ಉಂಟಾಗಿರುವ ಕಾನೂನು ಅಡ್ಡಿಯನ್ನು ಸರಿಪಡಿಸಲಾಗುವುದು ಎಂದರು. ಅಷ್ಟೇ ಅಲ್ಲದೆ ತಾಲೂಕಿನ ಹಲವಾರು ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕೆಂದಿದ್ದೆ. ಆದರೆ ವಿರೋಧ ಪಕ್ಷದವರು ಅಧಿವೇಶನದಲ್ಲಿ ಕೆಲವೊಂದು ವಿಷಯವನ್ನು ತೆಗೆದುಕೊಂಡು 7 ರಿಂದ 8 ದಿನಗಳಿಂದ ಗಲಾಟೆ ಮಾಡುತ್ತಿರುವುದರಿಂದ ಸಾಧ್ಯವಾಗಿಲ್ಲ ಎಂದರು.
ಮುಖಂಡರಾದ ಸತೀಶ್, ನಯನಾ, ಶ್ರೀಧರ್, ಮಧು, ಧ್ರುವಕುಮಾರ್, ಚಂದ್ರಹಾಸ, ಧನಂಜಯ, ಪ್ರಶಾಂತ್, ನಾರಾಯಣ, ಪ್ರಭು ಇದ್ದರು.