ವಿದೇಶಾಂಗ ಸಚಿವ ಎಸ್. ಜೈಶಂಕರ್ ರಷ್ಯಾ ಭೇಟಿ; ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ! | S Jaishankar

S Jaishankar
Published on

S Jaishankar: ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ (ಆಗಸ್ಟ್​​ 21) ರಷ್ಯಾಗೆ ಭೇಟಿ ನೀಡಿ, ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ.

ಮಾಸ್ಕೋದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಾರತ ಮತ್ತು ರಷ್ಯಾ ಎರಡನೇ ಮಹಾಯುದ್ಧದ ನಂತರ ವಿಶ್ವದ ಪ್ರಮುಖ ಸಂಬಂಧಗಳಲ್ಲಿ ಅತ್ಯಂತ ಸ್ಥಿರವಾಗಿವೆ ಎಂದು ಹೇಳಿದ್ದು, ಇದಕ್ಕೆ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸಮ್ಮತಿ ಸೂಚಿಸುವ ಭಾವನೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಇಂದಿನ ಸಭೆ ಎರಡು ದೇಶಗಳ ನಡುವಿನ ರಾಜಕೀಯ ಸಂಬಂಧವನ್ನು ಚರ್ಚಿಸಲು ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಲು ಒಂದು ಅವಕಾಶವನ್ನು ನೀಡುತ್ತದೆ ಎಂದರು. ರಾಜಕೀಯ, ವ್ಯಾಪಾರ, ಆರ್ಥಿಕ ಹೂಡಿಕೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜನರಿಂದ ಜನರ ವಿನಿಮಯದ ಅಭಿಪ್ರಾಯಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.

ಕಳೆದ ವರ್ಷ ನಡೆದ 22ನೇ ವಾರ್ಷಿಕ ಶೃಂಗಸಭೆ ಮತ್ತು ನಂತರದ ಕಜಾನ್‌ನಲ್ಲಿ ನಡೆದ ನಾಯಕತ್ವ ಸಭೆಗಳು ಸೇರಿದಂತೆ ಇತ್ತೀಚಿನ ಉನ್ನತ ಮಟ್ಟದ ಕಾರ್ಯಕ್ರಮಗಳ ಕುರಿತು ಜೈಶಂಕರ್ ಮಾತನಾಡಿದ್ದು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮುಂದಿನ ಶೃಂಗಸಭೆಗೆ ಈಗ ಸಿದ್ಧತೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಮತ್ತು ನೀತಿ ಆಯೋಗದ ಉಪಾಧ್ಯಕ್ಷೆ ಸುಮನ್ ಬೆರಿ ಅವರ ಭೇಟಿಗಳನ್ನು ಉಲ್ಲೇಖಿಸಿದರು.

ರಷ್ಯಾದ ವಿದೇಶಾಂಗ ಸಚಿವಾಲಯದ ಪ್ರಕಾರ, ಸಭೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಪ್ರಸ್ತುತ ಮತ್ತು ಭವಿಷ್ಯದ ಮಾರ್ಗಗಳ ಬಗ್ಗೆ ಎರಡೂ ಕಡೆಯವರು ವಿಶೇಷ ಗಮನ ಹರಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಾರಿಗೆ, ಇಂಧನ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವುದು ಸಹ ಕಾರ್ಯಸೂಚಿಯಲ್ಲಿರುತ್ತದೆ ಎಂದು ಅದು ಹೇಳಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net