

ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಪಕ್ಷದ ಜೊತೆ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮಾತುಕತೆ ನಡೆಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹರಿಬಿಡಲಾಗಿದೆ ಎಂದು ಗುರುವಾರ(ಅ. 30) ಎಐಎಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಡಪ್ಪಾಡಿ.ಕೆ.ಪಳನಿಸ್ವಾಮಿ(Edappadi K Palaniswami) ಹೇಳಿದ್ದಾರೆ
ಸ್ವಾತಂತ್ರ್ಯ ಹೋರಾಟಗಾರ ಪಸುಂಪನ್ ಮುತ್ತುರಾಮಲಿಂಗ ದೇವರ 118 ನೇ ಜನ್ಮ ದಿನಾಚರಣೆ ಮತ್ತು 63 ನೇ ವಾರ್ಷಿಕ ಗುರು ಪೂಜೆಯ ಸಂದರ್ಭದಲ್ಲಿ ಮಧುರೈನಲ್ಲಿ ಮಾತನಾಡಿರುವ ಅವರು, ಮೈತ್ರಿಕೂಟದ ಕುರಿತು ವಿಜಯ್ ಅವರೊಂದಿಗೆ ಯಾವುದೇ ಚರ್ಚೆಗಳು ನಡೆದಿಲ್ಲ. ನಮ್ಮ ರ್ಯಾಲಿಗಳಲ್ಲಿ ಕೆಲವರು ಟಿವಿಕೆ ಧ್ವಜದೊಂದಿಗೆ ನಮ್ಮನ್ನು ಸ್ವಾಗತಿಸಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಇನ್ನು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಸೆಂಗೊಟ್ಟೈಯನ್ ಮಾಜಿ ಸಿಎಂ ಒ. ಪನ್ನೀರ್‌ಸೆಲ್ವಂ ಭೇಟಿ ಮಾಡಿ ಅವರೊಂದಿಗೆ ಕೈಜೋಡಿಸಿದ್ದರ ಬಗ್ಗೆ ಕಿಡಿಕಾರಿದ ಅವರು, ಒಪಿಎಸ್, ಸೆಂಗೊಟ್ಟೈಯನ್, ಶಶಿಕಲಾ ಹಾಗೂ ಟಿಟಿವಿ ದಿನಕರನ್ ಡಿಎಂಕೆ ಪಕ್ಷದ ಬಿ ಟೀಂಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ರ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬರದಿಲು ಇವರ ಪಿತೂರಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಪಕ್ಷಕ್ಕೆ ದ್ರೋಹ ಬಗೆದ ಮತ್ತು ಪಕ್ಷದ ನಿಯಮಗಳನ್ನು ಉಲ್ಲಂಘಿಸುವ ಯಾರನ್ನೂ ಸಹಿಸಲಾಗುವುದಿಲ್ಲ. ಅಂತಹ ಜನರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)