ಬಿಹಾರ ಚುನಾವಣೆ: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ನೇತೃತ್ವದ ಎನ್​ಡಿಎ; 1 ಕೋಟಿ ಸರ್ಕಾರಿ ಉದ್ಯೋಗ ಸೇರಿ ಅನೇಕ ಭರವಸೆ| NDA Manifesto

ವಿಜಯವಾಣಿ - 2025-10-31T110550.553
Published on

ಪಾಟ್ನಾ: 2025ರ ಬಿಹಾರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ವಾರ ಇರುವಾಗ ಬಿಜೆಪಿ ನೇತೃತ್ವದ ಎನ್​ಡಿಎ ಕೂಟ(NDA Manifesto) ಇಂದು(ಅ. 31) ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎನ್‌ಡಿಎ 'ಸಂಕಲ್ಪ ಪತ್ರ'ವನ್ನು ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬೆಳಿಗ್ಗೆ ಪಾಟ್ನಾದಲ್ಲಿ ಬಿಡುಗಡೆ ಮಾಡಿದರು.

ಬಿಹಾರದಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದ್ರೆ, ಬೃಹತ್ ವಲಸಿಗ ಕಾರ್ಮಿಕರಿರುವ ರಾಜ್ಯದಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗ ಒದಗಿಸುವ ಬೃಹತ್ ಭರವಸೆ ನೀಡಿದೆ. ಹಾಗೆಯೇ ಬಿಹಾರದ ಪ್ರತಿಯೊಬ್ಬ ಯುವಕರಿಗೂ ಕೌಶಲ್ಯ ಆಧಾರಿತ ಉದ್ಯೋಗವನ್ನು ಒದಗಿಸಲು ಕೌಶಲ್ಯ ಜನಗಣತಿ ನಡೆಸುವುದಾಗಿ ಹೇಳಿದ್ದು, ಪ್ರತಿ ಜಿಲ್ಲೆಯಲ್ಲಿ ಮೆಗಾ ಕೌಶಲ್ಯ ಕೇಂದ್ರಗಳೊಂದಿಗೆ ಬಿಹಾರವನ್ನು ಜಾಗತಿಕ ಕೌಶಲ್ಯ ಕೇಂದ್ರವಾಗಿ ಸ್ಥಾಪಿಸುತ್ತೇವೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯ ಮೂಲಕ ಮಹಿಳೆಯರಿಗೆ 2 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡುವ ಮೂಲಕ ಒಂದು ಕೋಟಿ ಮಹಿಳೆಯನ್ನು ಲಕ್ಷಪತಿ ದೀದಿಗಳನ್ನಾಗಿ ಮಾಡುವ ಗುರಿಯನ್ನು ಹಾಕಿಕೊಂಡಿದೆ. ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಏಳು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಾಣ ಮಾಡುವುದಾಗಿ ಅನೇಕ ಘೋಷಣೆಗಳನ್ನು ಮಾಡಿದೆ.

ಪ್ರತಿ ಜಿಲ್ಲೆಯಲ್ಲಿ ಕಾರ್ಖಾನೆಗಳು ಮತ್ತು 10 ಹೊಸ ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ, ಕನಿಷ್ಠ 100 MSME ಪಾರ್ಕ್‌ಗಳು ಮತ್ತು 50,000ಕ್ಕೂ ಹೆಚ್ಚು ಗುಡಿ ಕೈಗಾರಿಕೆಗಳ ನಿರ್ಮಾಣ ಭರವಸೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ವಿಶ್ವ ದರ್ಜೆಯ ವೈದ್ಯಕೀಯ ಸಂಸ್ಥೆ ಮತ್ತು ವೈದ್ಯಕೀಯ ಕಾಲೇಜು ಸ್ಥಾಪನೆ. ರಕ್ಷಣಾ ಕಾರಿಡಾರ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಪಾರ್ಕ್ ನಿರ್ಮಾಣ. ಬಿಹಾರವನ್ನು ದಕ್ಷಿಣ ಏಷ್ಯಾದ ಜವಳಿ ಮತ್ತು ರೇಷ್ಮೆ ಕೇಂದ್ರವಾಗಿ ಸ್ಥಾಪಿಸುವುದಾಗಿ ಪ್ರತಿಜ್ಞೆ ಮಾಡಲಾಗಿದೆ.‘

ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್​ಪಿ) ಖಾತರಿ ಜೊತೆಗೆ ಕಿಸಾನ್ ಸಮ್ಮಾನ್ ನಿಧಿಯನ್ನು 6,000 ರೂ.ಗಳಿಂದ 7,000 ರೂ.ಗಳಿಗೆ ಹೆಚ್ಚಿಸಲಾಗುವುದು, ಮೀನುಗಾರರಿಗೆ ನೀಡುವ ಸಹಾಯಧವನ್ನು 9 ಸಾವಿರ ರೂ, ಹೆಚ್ಚಿಸುವ ಭರವಸೆ ನೀಡಲಾಗಿದೆ. ಸೀತೆಯ ಜನ್ಮಸ್ಥಳವನ್ನು 'ಸೀತಾಪುರಂ' ಎಂದು ವಿಶ್ವದರ್ಜೆಯ ಆಧ್ಯಾತ್ಮಿಕ ನಗರ ಮಾಡುವ ಭರವಸೆ. ವಿಷ್ಣುಪಾದ ಮತ್ತು ಮಹಾಬೋಧಿ ಕಾರಿಡಾರ್‌ಗಳ ನಿರ್ಮಾಣವೂ ಸೇರಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net