

Britain: ಬ್ರಿಟನ್‌ನ ರಾಜ ಚಾರ್ಲ್ಸ್ III ತನ್ನ ಕಿರಿಯ ಸಹೋದರ ಪ್ರಿನ್ಸ್ ಆಂಡ್ರ್ಯೂ ಅವರನ್ನು ಲೈಂಗಿಕ ಹಗರಣ, ಕ್ರಿಮಿನಲ್ ಆರೋಪಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಸ್ನೇಹ ಸಂಬಂಧದಿಂದಾಗಿ ಎಲ್ಲಾ ಗೌರವ ಬಿರುದುಗಳನ್ನು ಕಸಿದುಕೊಂಡು ಅವರನ್ನು ಅರಮನೆಯಿಂದ ಹೊರ ಹಾಕಿದ್ದಾರೆ ಎಂದು ಗುರುವಾರ(ಅ. 30) ಬಕಿಂಗ್ ಹ್ಯಾಮ್ ಅರಮನೆ(Buckingham Palace) ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ ಮೃತ ಲೈಂಗಿಕ ಅಪರಾಧಿ ಮತ್ತು ಶಿಶುಕಾಮಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸ್ನೇಹದಿಂದ ಈ ಹಿಂದೆ ಆಂಡ್ರ್ಯೂ ಡ್ಯೂಕ್ ಆಫ್ ಯಾರ್ಕ್ ಎಂಬ ಬಿರುದನ್ನು ಬಳಸುವುದನ್ನು ಕೈಬಿಡಲಾಗಿತ್ತು. ರಾಜ ಚಾರ್ಲ್ಸ್ ಮೇಲೆ ತೀವ್ರ ಒತ್ತಡ ಹೆಚ್ಚಾಗುತ್ತಿದ್ದಂತೆ ತಕ್ಷಣ ವಿಂಡ್ಸರ್ ನಿವಾಸವನ್ನು ಖಾಲಿ ಮಾಡುವಂತೆ ಆದೇಶಿಸಿಲಾಗಿದ್ದು, ದಿವಂಗತ ರಾಣಿ ಎಲಿಜಬೆತ್ II ರವರಿಗೆ ಜನಿಸಿದಾಗಿನಿಂದ ಆಂಡ್ರ್ಯೂ ಹೊಂದಿದ್ದ "ರಾಜಕುಮಾರ" ಎಂಬ ಬಿರುದನ್ನು ತೆಗೆದುಹಾಕಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಆಂಡ್ರ್ಯೂ ಇನ್ನು ಮುಂದೆ ರಾಜಕುಮಾರ ಎಂದು ಕರೆಯಲ್ಪಡುವುದಿಲ್ಲ, ಬದಲಿಗೆ ಅವರ ಪೂರ್ಣ ಹೆಸರು ಆಂಡ್ರ್ಯೂ ಮೌಂಟ್‌ಬ್ಯಾಟನ್-ವಿಂಡ್ಸರ್ ಎಂದು ಕರೆಯಲ್ಪಡುತ್ತಾರೆ ಎಂದು ಅರಮನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಂಡ್ಸರ್ ಕ್ಯಾಸಲ್ ಆವರಣದೊಳಗಿನ ಅವರ ಮಹಲು ರಾಯಲ್ ಲಾಡ್ಜ್‌ನ ಗುತ್ತಿಗೆಯನ್ನು ಬಿಟ್ಟುಕೊಡುವಂತೆ ಔಪಚಾರಿಕ ಸೂಚನೆ ನೀಡಲಾಗಿದೆ. ಡ್ಯೂಕ್ ಅವರನ್ನು ಪರ್ಯಾಯ ಖಾಸಗಿ ವಸತಿ ಸೌಕರ್ಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದೆ.
ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನು ಆಂಡ್ರ್ಯೂ ಆರಂಭದಿಂದಲೇ ನಿರಾಕರಿಸಿದ್ದಾರೆ. ಆದರೆ ಈ ಕ್ರಮ ಅಗತ್ಯವೆಂದು ಅರಮನೆ ಹೇಳಿದ್ದು, ಯಾವುದೇ ರೀತಿಯ ದೌರ್ಜನ್ಯದ ಬಲಿಪಶುಗಳು ಮತ್ತು ಬದುಕುಳಿದವರೊಂದಿಗೆ ಅವರ ಆಲೋಚನೆಗಳು ಮತ್ತು ಅತ್ಯಂತ ಸಹಾನುಭೂತಿ ಇದೆ ಮತ್ತು ಇರುತ್ತದೆ ಎಂದು ಅವರ ಮಹಾರಾಜರು ಸ್ಪಷ್ಟಪಡಿಸಲು ಬಯಸುತ್ತಾರೆ ಎಂದು ತಿಳಿಸಿದೆ.
2006ರಲ್ಲಿ ಪ್ರಿನ್ಸೆಸ್ ಬೀಟ್ರಿಸ್ ಅವರ 18ನೇ ಬರ್ತಡೇ ಆಚರಣೆಯ ಸಂದರ್ಭದಲ್ಲಿ ಎಪ್ಸ್ಟೀನ್, ಗಿಸ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಚಲನಚಿತ್ರ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ಅವರನ್ನು ವಿಂಡ್ಸರ್ ಕ್ಯಾಸಲ್‌ನ ರಾಯಲ್ ಲಾಡ್ಜ್‌ನಲ್ಲಿ ಆತಿಥ್ಯ ವಹಿಸಲಾಗಿತ್ತು ಎಂದು ಇತ್ತೀಚೆಗೆ ಬಿಬಿಸಿ ವರದಿ ಮಾಡಿತ್ತು. ಆ ಸಮಯದಲ್ಲಿ ಎಪ್ಸ್ಟೀನ್ ಲೈಂಗಿಕ ದೌರ್ಜನ್ಯಕ್ಕಾಗಿ ಯುಎಸ್ನಿಂದ ಬಂಧನ ವಾರಂಟ್ ಎದುರಿಸುತ್ತಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಆಂಡ್ರ್ಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2019ರಲ್ಲಿ ಬಿಬಿಸಿ ಸಂದರ್ಶನವೊಂದರಲ್ಲಿ ಎಪ್ಸ್ಟೀನ್ ಜೊತೆಗಿನ ತನ್ನ ಸಂಬಂಧವನ್ನು ಸಮರ್ಥಿಸಿಕೊಂಡ ನಂತರ ಆಂಡ್ರ್ಯೂ ರಾಜಮನೆತನದ ಕರ್ತವ್ಯಗಳಿಂದ ಹಿಂದೆ ಸರಿದರು. ಬಳಿಕ ವರ್ಜೀನಿಯಾದ ಗಿಯುಫ್ರೆ ತಾನೂ ಚಿಕ್ಕವಳಿದ್ದಾಗ ಎಪ್ಸ್ಟೀನ್ ಜೊತೆ ಸೇರಿ ಕಿಂಗ್ಸ್ ಆಂಡ್ರ್ಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. (ಏಜೆನ್ಸೀಸ್)