

ಕೊಚ್ಚಿ: ರಾಷ್ಟ್ರವ್ಯಾಪಿ ತೀವ್ರ ಸದ್ದು ಮಾಡಿರುವ ಜಸ್ಟಿಸ್ ಹೇಮಾ ಸಮಿತಿ ವರದಿ ಕೇರಳ ಸರ್ಕಾರಕ್ಕೆ ಸಲ್ಲಿಕೆಯಾದ ಮೇಲೆ ಖ್ಯಾತ ಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ನಟಿಯರು ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡುತ್ತಿದ್ಧಾರೆ. ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದ್ದು, ಬೇರೆ ಚಿತ್ರರಂಗಗಳ ನಟ-ನಟಿಯರು ತಮ್ಮ ಇಂಡಸ್ಟ್ರಿಯಲ್ಲಿನ ಪರಿಸ್ಥಿತಿಗಳ ಬಗ್ಗೆಯೂ ಸಮಿತಿ ರಚಿಸುವಂತೆ ಆಗ್ರಹಿಸುತ್ತಿದ್ದಾರೆ. ಇತ್ತ ಮಲಯಾಳಂ ಚಿತ್ರರಂಗದಲ್ಲಿನ ಹಗರಣಗಳು ಆಚೆ ಬರುತ್ತಿದ್ದಂತೆ #METOO ಅಭಿಯಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ದೇಶಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ.
#METOO ಅಭಿಯಾನ ಮುನ್ನೆಲೆಗೆ ಬರುತ್ತಿದ್ದಂತೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ನಿವಿನ್ ಪೌಲಿ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟ ತಮ್ಮ ತಪ್ಪು ಇಲ್ಲ ಎಂದು ಹೇಳಿಕೊಂಡಿದ್ದರು. ನಿವೀನ್ ಅವರನ್ನು ಬೆಂಬಲಿಸಿ ಅನೇಕರು ಮಾತನಾಡಿದ್ದರು. ಈಗ ಅವರು ತಮ್ಮ ತಪ್ಪಿಲ್ಲ ಎಂಬುದುನ್ನು ಸಾಬೀತು ಮಾಡಲು ಒಂದು ಹೆಜ್ಜೆ ಮುಂದೆ ಹೋಗಿದ್ದು, ಈ ವಿಚಾರದಲ್ಲಿ ನಟನ ಬೆಂಬಲಕ್ಕೆ ಅನೇಕರು ನಿಂತಿದ್ದಾರೆ.
ನಟ ನಿವಿನ್ ಪೌಲಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಅತ್ಯಾಚಾರ ದೂರು ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಜನತೆಗೆ ಸತ್ಯಾಂಶ ತಿಳಿಸಬೇಕೆಂದು ಕೋರಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದ್ದಾರೆ. ಈ ಘಟನೆ ನಡೆದಿದ್ದು ದುಬೈನಲ್ಲಿ ಎನ್ನಲಾಗಿದ್ದು, ಹೀಗಾಗಿ ತನಿಖಾ ಸಂದರ್ಭದಲ್ಲಿ ತಾವು ಅಲ್ಲಿಗೆ ತೆರಳುವುದಿಲ್ಲ ಎಂಬುದನ್ನು ಸಾಬೀತು ಮಾಡಲು ಈಗಾಗಲೇ ಅವರು ಪಾಸ್ಪೋರ್ಟ್ಅನ್ನು ಪೊಲೀಸರಿಗೆ ನೀಡಿರುವುದಾಗಿಗೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ವಿರುದ್ಧ ಹೆಣ್ಣುಮಗಳು ಕಿರುಕುಳ ಆರೋಪ ಹೊರಿಸಿದ್ದಾರೆ. ಇದು ನಿಜವಲ್ಲ. ಇದು ಸುಳ್ಳು ಎಂಬುದನ್ನು ಸಾಬೀತು ಮಾಡಲು ನಾನು ಯಾವ ಹಂತಕ್ಕೆ ಹೋಗಲೂ ಸಿದ್ಧನಿದ್ದೇನೆ ಎಂದು ನಟ ನಿವಿನ್ ಪೌಲಿ ಹೇಳಿದ್ದರು. ನಿವಿನ್ ಜೊತೆಗೆ ಮಲಯಾಳಂ ನಿರ್ಮಾಪಕ ಎಕೆ ಸುನೀಲ್ ಮೊದಲಾದವರ ವಿರುದ್ಧ ಈ ಆರೋಪ ಎದುರಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಸ್ಐಟಿ ಪ್ರಕರಣ ವರ್ಗಾವಣೆ ಮಾಡುವ ಸಾಧ್ಯತೆ ಇದೆ.