ಈ ವಿಚಾರಕ್ಕೆ ಹೆದರಿದ್ರಾ ನಿವೇದಿತಾ? ಇಡೀ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಮೊಬೈಲ್​ ಕೂಡ….

Niveditha Gowda
Published on

ಬೆಂಗಳೂರು: ಬಿಗ್​ಬಾಸ್​ ಜೋಡಿ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್​ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ನಟ ಸೃಜನ್​ ಲೋಕೇಶ್​ ಹೆಸರನ್ನು ತಳುಕು ಹಾಕುತ್ತಿದ್ದರೆ, ಇನ್ನು ಕೆಲವರು ಮಗು ಮಾಡಿಕೊಳ್ಳಲು ನಿವೇದಿತಾ ಒಪ್ಪಿಕೊಳ್ಳದಿದ್ದಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎನ್ನುತ್ತಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಮುನ್ನಡೆಯಲು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ ಪಡೆದುಕೊಂಡಿರುವುದಾಗಿ ಚಂದನ್​ ಮತ್ತು ನಿವೇದಿತಾ ಸ್ಪಷ್ಟನೆ ನೀಡಿದ್ದಾರೆ. ಆದರೂ, ವದಂತಿ ಮಾತ್ರ ಕಡಿಮೆ ಆಗಿಲ್ಲ.

ತಾಜಾ ಸಂಗತಿ ಏನೆಂದರೆ, ನಿವೇದಿತಾ ಗೌಡ ಕುಟುಂಬ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ನಿವೇದಿತಾ ಕುಟುಂಬ ವಾಸವಿದ್ದು, ಡಿವೋರ್ಸ್​ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಮನೆ ಖಾಲಿ ಮಾಡಿಕೊಂಡು ಎಲ್ಲಿಗೂ ತೆರಳಿದ್ದಾರೆ ಎಂದು ತಿಳಿದಬಂದಿದೆ. ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ ಮತ್ತು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆಪ್ತರು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಮೊಬೈಲ್ ಸ್ವಿಚ್​ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಗುರುವಾರದಿಂದಲೇ ಮನೆಗೆ ಬೀಗ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಕ್ಕಪಕ್ಕದವರು ಮತ್ತು ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಏನು ಉತ್ತರಿಸುವುದು ಎಂಬ ಭಯದಿಂದ ಅಂತರ ಕಾಯ್ದುಕೊಳ್ಳಲು ಊರು ತೊರೆದಿದ್ದಾರೆಂದು ತಿಳಿದುಬಂದಿದೆ.

ಅಂದಹಾಗೆ ಬಿಗ್​ಬಾಸ್​ ಕನ್ನಡ ಸೀಸನ್​ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿ ಇಬ್ಬರು 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಚಂದನ್ ಶೆಟ್ಟಿ ಸಿನಿಮಾ ಇಂಡಸ್ಟ್ರೀಯಲ್ಲಿ ಪತ್ನಿ ನಿವೇದಿತಾ ಗೌಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಗುರುವಾರ (ಜೂನ್​ 6) ಡಿವೋರ್ಸ್​ಗಾಗಿ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶುಕ್ರವಾರ ನ್ಯಾಯಾಲಯ ಇಬ್ಬರಿಗೂ ಡಿವೋರ್ಸ್​ ಮಂಜೂರು ಮಾಡಿದೆ. ಚಂದನ್​ ಮತ್ತು ನಿವೇದಿತಾ ಕಳೆದ ಒಂದು ವರ್ಷಗಳಿಂದ ಕಾಯ್ದುಕೊಂಡಿದ್ದರು ಎನ್ನಲಾಗಿದೆ.

ಇನ್ನು ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಶೆಟ್ಟಿ ಜತೆಗಿನ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿರುವ ನಿವೇದಿತಾ ಗೌಡ, ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ” ಎಂದಿದ್ದಾರೆ.

ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು. ಇಂತಿ ನಿಮ್ಮ ನಿವೇದಿತಾ ಗೌಡ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net