ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35 ಮೀಸಲಾತಿ ಘೋಷಿಸಿದ ಸಿಎಂ ನಿತೀಶ್​ ಕುಮಾರ್​! Nitish Kumar

Nitish Kumar
Published on

Nitish Kumar : ಬಿಹಾರ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬಂಪರ್​ ಘೋಷಣೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ, ಪ್ರತಿಯೊಂದು ಜಾತಿಯ ಮಹಿಳೆಯರಿಗೆ ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ಶೇ. 35 ರಷ್ಟು ಮೀಸಲಾತಿಯನ್ನು ಘೋಷಿಸಿದ್ದಾರೆ.

ಎಲ್ಲಾ ರಾಜ್ಯ ಸರ್ಕಾರಿ ಸೇವೆಗಳಲ್ಲಿ ಎಲ್ಲಾ ವರ್ಗದ, ಎಲ್ಲಾ ಮಟ್ಟದ ಮತ್ತು ಎಲ್ಲಾ ರೀತಿಯ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಬಿಹಾರದ ಮೂಲ ನಿವಾಸಿಗಳಾದ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ 35% ಮೀಸಲಾತಿ ನೀಡಲಾಗುವುದು ಎಂದು ನಿತೀಶ್ ಕುಮಾರ್ ಇಂದು ಹೇಳಿದರು.

ಸಾರ್ವಜನಿಕ ಸೇವೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ನಮ್ಮ ಸರ್ಕಾರ ಮುಂದಾಗಿದೆ. ಬಿಹಾರದಲ್ಲಿ ಹೆಚ್ಚಿನ ಮಹಿಳೆಯರು ಕಾರ್ಯಪಡೆಗೆ ಪ್ರವೇಶಿಸುವುದನ್ನು ಮತ್ತು ಆಡಳಿತದಲ್ಲಿ ದೊಡ್ಡ ಪಾತ್ರವನ್ನು ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ಎಕ್ಸ್​ ಖಾತೆಯಲ್ಲಿ ನಿತೀಶ್​ ಕುಮಾರ್​ ತಿಳಿಸಿದರು.

ಬಿಹಾರ ರಾಜಧಾನಿ ಪಟನಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ವೇಳೆ ಯುವಜನರಿಗೆ ತಮ್ಮ ಸರ್ಕಾರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು, ನಿತೀಶ್ ಕುಮಾರ್ ಅವರು ಬಿಹಾರ ಯುವ ಆಯೋಗದ ರಚನೆಯನ್ನು ಸಹ ಘೋಷಿಸಿದರು. ಇದು ರಾಜ್ಯ ಸಚಿವ ಸಂಪುಟದಿಂದ ಅನುಮೋದಿಸಲ್ಪಟ್ಟ ಹೊಸ ಶಾಸನಬದ್ಧ ಸಂಸ್ಥೆಯಾಗಿದೆ.

ಬಿಹಾರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು, ಅವರಿಗೆ ತರಬೇತಿ ನೀಡಲು ಮತ್ತು ಅವರನ್ನು ಸಬಲೀಕರಣಗೊಳಿಸಲು ಮತ್ತು ಸಮರ್ಥರನ್ನಾಗಿ ಮಾಡಲು ಸರ್ಕಾರ ಬಿಹಾರ ಯುವ ಆಯೋಗವನ್ನು ರಚಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಇಂದು ಸಂಪುಟ ಇದಕ್ಕೆ ಅನುಮೋದನೆ ನೀಡಿದೆ ಎಂದು ಸಿಎಂ ನಿತೀಶ್​ ಕುಮಾರ್​ ಹೇಳಿದ್ದಾರೆ.

ಬಿಹಾರ ಯುವ ಆಯೋಗವು ರಾಜ್ಯದ ಯುವಕರ ಉನ್ನತಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಯುವಜನರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಈ ಆಯೋಗವು ಒಬ್ಬ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಏಳು ಸದಸ್ಯರನ್ನು ಒಳಗೊಂಡಿರುತ್ತದೆ. ಎಲ್ಲರೂ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ರಾಜ್ಯದೊಳಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ಸಿಗುವಂತೆ ನೋಡಿಕೊಳ್ಳುವುದರ ಜೊತೆಗೆ, ರಾಜ್ಯದ ಹೊರಗೆ ಅಧ್ಯಯನ ಮಾಡುತ್ತಿರುವ ಅಥವಾ ಉದ್ಯೋಗದಲ್ಲಿರುವ ಬಿಹಾರದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದರು.

ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಸಾಮಾಜಿಕ ದುಷ್ಕೃತ್ಯಗಳನ್ನು ನಿಗ್ರಹಿಸಲು ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಆಯೋಗಕ್ಕೆ ವಹಿಸಲಾಗುವುದು ಮತ್ತು ಅಂತಹ ವಿಷಯಗಳಲ್ಲಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಲಿದೆ. ಈ ಉಪಕ್ರಮವು ಬಿಹಾರದ ಯುವಕರನ್ನು ಸ್ವಾವಲಂಬಿ, ಕೌಶಲ್ಯಪೂರ್ಣ ಮತ್ತು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇದು ಮುಂಬರುವ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net