

Virat Kohli : ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಭಾರತದಿಂದ ಲಂಡನ್ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂಬ ವರದಿಗಳು ಬಹಳ ವರ್ಷದಿಂದ ಚರ್ಚೆಯಾಗುತ್ತಲೇ ಇದೆ. ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಕುಟುಂಬದೊಂದಿಗೆ ಲಂಡನ್ನಲ್ಲಿ ನೆಲೆಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಆಗಾಗ್ಗೆ ರಜೆಗಾಗಿ ಲಂಡನ್ಗೆ ಭೇಟಿ ನೀಡುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.
ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ ಟೀಮ್ ಇಂಡಿಯಾ ನಾಯಕ ಶುಭಮಾನ್ ಗಿಲ್, ಉಪನಾಯಕ ರಿಷಭ್ ಪಂತ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಲಂಡನ್‌ನ ತಮ್ಮ ನಿವಾಸದಲ್ಲಿ ಕೊಹ್ಲಿ ಆತಿಥ್ಯ ನೀಡಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಯಿತು. ಈಗಾಗಲೇ ಕೊಹ್ಲಿ ಲಂಡನ್ನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಲಂಡನ್ನಲ್ಲಿ ಎಲ್ಲಿ ನೆಲೆಸಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೀಗ, ಅದು ಕೂಡ ಬಹಿರಂಗವಾಗಿದೆ.
ವಿರಾಟ್ ಕೊಹ್ಲಿ ಅವರು ಪ್ರಸ್ತುತ ಲಂಡನ್‌ನ ನಾಟಿಂಗ್ ಹಿಲ್ನಲ್ಲಿ ವಾಸಿಸುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಅದು ಸುಳ್ಳು ಎನ್ನಲಾಗಿದೆ. ಇದೀಗ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಜೊನಾಥನ್ ಟ್ರಾಟ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಕೊಹ್ಲಿ ಲಂಡನ್‌ನ ಸೇಂಟ್ ಜಾನ್ಸ್ವುಡ್ನಲ್ಲಿ ವಾಸಿಸುತ್ತಿದ್ದಾರೆ ಎಂದು ಜೊನಾಥನ್ ಉಲ್ಲೇಖಿಸಿದ್ದಾರೆ. ಯಾವಾಗ ಈ ಸುಳಿವು ನೀಡಿದ್ರೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸೋನಿ ಸ್ಪೋರ್ಟ್ಸ್‌ನಲ್ಲಿ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ಕುರಿತ ಚರ್ಚೆಯ ಸಂದರ್ಭದಲ್ಲಿ ಜೊನಾಥನ್ ಅವರು ಇದನ್ನು ಪ್ರಸ್ತಾಪಿಸಿದ್ದಾರೆ.
ಕೊಹ್ಲಿ ಅವರು ಸೇಂಟ್ ಜಾನ್ಸ್ವುಡ್ನಲ್ಲಿ ಅಥವಾ ಹತ್ತಿರದಲ್ಲಿ ವಾಸಿಸುತ್ತಿಲ್ಲವೇ? ಅವರನ್ನು ಹಿಂತಿರುಗಿ ಬರಲು ಮನವೊಲಿಸಲು ಸಾಧ್ಯವಿಲ್ಲವೇ? ಎಂದು ಸೋನಿ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಟ್ರಾಟ್ ಕೇಳಿದರು. ಇದನ್ನು ಕೇಳಿದ ಅಭಿಮಾನಿಗಳು ಕೊಹ್ಲಿ ಮನೆ ಆ ಪ್ರದೇಶದಲ್ಲಿಯೇ ಇದೆ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಸೇಂಟ್ ಜಾನ್ಸ್ವುಡ್ ವಾಯುವ್ಯ ಲಂಡನ್‌ನಲ್ಲಿರುವ ಐಷಾರಾಮಿ ವಸತಿ ಪ್ರದೇಶವಾಗಿದೆ. ಲಂಡನ್‌ನ ರಾಯಲ್ ಪಾರ್ಕ್‌ಗಳಲ್ಲಿ ಒಂದಾದ ರೀಜೆಂಟ್ಸ್ ಪಾರ್ಕ್ ಸೇಂಟ್ ಜಾನ್ಸ್ ವುಡ್ ಬಳಿ ಇದೆ. ಕೊಹ್ಲಿ ಒಂದು ವರ್ಷದ ಹಿಂದೆ ಇಲ್ಲಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)