

Evil spirit : ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಆಕೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ಜಂಬರಗಟ್ಟೆಯಲ್ಲಿ ಭಾನುವಾರ (ಜುಲೈ 06) ರಾತ್ರಿ ನಡೆದಿದೆ.
ಮೃತಳನ್ನು ಗೀತಮ್ಮ (45) ಎಂದು ಗುರುತಿಸಲಾಗಿದೆ. ಆಕೆಯ ಪುತ್ರ ಸಂಜಯ್ ಮತ್ತು ದೆವ್ವ ಬಿಡಿಸುವುದಾಗಿ ಹೇಳಿದ ಇನ್ನಿಬ್ಬರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಇದೆಲ್ಲವು ಶುರುವಾಗಿದ್ದು ಮೃತ ಗೀತಮ್ಮಳ ಪುತ್ರ ಸಂಜಯ್ನಿಂದ. ತಮ್ಮ ತಾಯಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿದ ಸಂಜಯ್, ಪೂಜೆ ಮಾಡಿ ದೆವ್ವ ಬಿಡುಸುತ್ತೇನೆಂದು ಹೇಳಿದ ಆಶಾ ಎಂಬ ಮಹಿಳೆಯ ಬಳಿ ಕರೆದೊಯ್ದ. ಇದಾದ ಬಳಿಕ ಆಶಾ, ತನ್ನ ಪತಿ ಸಂತೋಷ್ ಜೊತೆಗೂಡಿ ಗೀತಮ್ಮನ ಮನೆಗೆ ಭೇಟಿ ನೀಡಿದಳು. ಬಳಿಕ ಭೂತೋಚ್ಚಾಟನೆ ಎಂದು ಕರೆಯುವ ವಿಧಿ-ವಿಧಾನವನ್ನು ಆರಂಭಿಸಿದರು.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ಅದರಲ್ಲಿ ಗೀತಮ್ಮ ಕೂದಲು ತೆರೆದುಕೊಂಡು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಆಶಾ ಎಂದು ಹೇಳಲಾಗುವ ಇನ್ನೊಬ್ಬ ಮಹಿಳೆ ಗೀತಮ್ಮಳ ತಲೆಯ ಸುತ್ತ ನಿಂಬೆಹಣ್ಣನ್ನು ತಿರುಗಿಸಿ, ಅದೇ ನಿಂಬೆಹಣ್ಣಿನಿಂದ ಅವಳ ತಲೆಗೆ ಹೊಡೆಯುತ್ತಾಳೆ. ನಂತರ ಆಶಾ ನಿಂಬೆಹಣ್ಣನ್ನು ಎರಡು ಭಾಗಗಳಾಗಿ ಸೀಳಿ ಗೀತಮ್ಮಳ ಕೂದಲಿಗೆ ಹೊಡೆದು ತಲೆಯ ಮೇಲೆ ಉಜ್ಜಿ ಹೊಡೆಯುತ್ತಾಳೆ. ಉಳಿದ ಅರ್ಧ ನಿಂಬೆಹಣ್ಣಿನಿಂದ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತಾಳೆ.
ದೆವ್ವ ಬಿಡಸುತ್ತೇನೆ ಎಂದು ಸ್ವಯಂ ಘೋಷಿಸಿಕೊಂಡಿರುವ ಆಶಾ, ಗೀತಮ್ಮಳ ಕೂದಲನ್ನು ಹಿಡಿದು ನಾಲ್ಕು ಬಾರಿ ಹೊಡೆಯುತ್ತಾಳೆ. ಹೊಡೆತವನ್ನು ಸಹಿಸದ ಗೀತಮ್ಮ ನೆಲಕ್ಕೆ ಬೀಳುತ್ತಾಳೆ. ನಂತರ ಆಶಾ, ಕೋಲನ್ನು ಎತ್ತಿಕೊಂಡು ಹಿರಿಯ ಮಹಿಳೆಗೆ ಪದೇ ಪದೇ ಬಾರಿಸುತ್ತಾಳೆ. ಆ ಹೊಡೆತದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗೀತಮ್ಮ ಹಲವಾರು ಪ್ರಯತ್ನಗಳನ್ನು ಮಾಡಿದರೂ ಎಲ್ಲವೂ ವ್ಯರ್ಥವಾಯಿತು.
ಕ್ಯಾಮೆರಾದಲ್ಲಿ ದಾಖಲಾಗಿರುವ ಈ ಹಲ್ಲೆ ರಾತ್ರಿ 9.30ರ ಸುಮಾರಿಗೆ ಪ್ರಾರಂಭವಾಗಿ, ಬೆಳಗಿನ ಜಾವ 1 ಗಂಟೆಯವರೆಗೆ ನಡೆಯಿತು ಎನ್ನಲಾಗಿದೆ. ನಿರಂತರ ಹೊಡೆತದ ಪರಿಣಾಮವಾಗಿ, ಗೀತಮ್ಮ ಸಾವಿಗೀಡಾಗಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಮೂವರು ಆರೋಪಿಗಳಾದ ಗೀತಮ್ಮಳ ಪುತ್ರ ಸಂಜಯ್, ಆಶಾ ಮತ್ತು ಸಂತೋಷ್ ಅವರನ್ನು ಬಂಧಿಸಲಾಗಿದೆ.