ರಸ್ತೆ ಕಾಮಗಾರಿ ನನಗೆ ತೃಪ್ತಿ ನೀಡಿಲ್ಲ... ಇದಕ್ಕಾಗಿ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದ ಗಡ್ಕರಿ!

Nitin Gadkari
ಸಾಂದರ್ಭಿಕ ಚಿತ್ರ
Published on

ಮಧ್ಯಪ್ರದೇಶ: ಮಂಡ್ಲಾದಿಂದ ಜಬಲ್​ಪುರ ನಡುವಿನ ದ್ವಿಪಥ ಹೆದ್ದಾರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದೆ. ಆದರೆ ಈ ಹೆದ್ದಾರಿಯ ಬರೇಲಾದಿಂದ ಮಂಡ್ಲಾವರೆಗಿನ ಕಾಮಗಾರಿಯ ಒಂದು ಭಾಗವನ್ನು ಕೆಟ್ಟದಾಗಿ ನಿರ್ಮಾಣ ಮಾಡಲಾಗಿದೆ. ಇದು ನನಗೆ ತೃಪ್ತಿ ನೀಡಿಲ್ಲ ಎಂದು ಹೇಳಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ. ನಂತರ ಕಳಪೆ ಕಾಮಗಾರಿ ಆಗಿರುವ ಭಾಗವನ್ನು ಪುನಃ ಸರಿಪಡಿಸಲಾಗುವುದು. ಇದಕ್ಕಾಗಿ ಹೊಸ ಗುತ್ತಿಗೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರಸ್ತೆ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸಿದ್ದೇನೆ. ಶೀಘ್ರದಲ್ಲಿಯೇ ಉತ್ತಮವಾದ ರಸ್ತೆ ನಿರ್ಮಾಣ ಆಗಲಿದೆ. ಈವರೆಗೆ ನೀವು ಎದುರಿಸಿದ ಸಮಸ್ಯೆಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಇತ್ತೀಚೆಗೆ ಗಡ್ಕರಿ ಮಾತನಾಡುತ್ತಾ, ಎರಡು ಬಾರಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್​ ಅವರ ಆರ್ಥಿಕ ಸುಧಾರಣೆಗೆ ದೇಶ ಋಣಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ರಸ್ತೆ ಕಾಮಗಾರಿ ಸರಿಯಾಗಿ ನಡೆಯದೇ ಇರುವುದಕ್ಕೆ ಜನರ ಬಳಿ ಕ್ಷೇಮೆ ಕೇಳಿ ಸುದ್ದಿಯಾಗಿದ್ದಾರೆ. ಕೇಂದ್ರ ಸಚಿವ ಗಡ್ಕರಿ ಅವರ ಈ ನಡೆ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net