ಗ್ಲಾಮರಸ್​ ಬ್ಯೂಟಿಯ ಕನ್ನಡ ಪ್ರೇಮ; 'ಜಯಭೇರಿ ಕನ್ನಡ' ಹಾಡಿನಲ್ಲಿ ನಿಶ್ವಿಕಾ ಮಿಂಚು

Untitled design (14)
Published on

ಬೆಂಗಳೂರು: ಡಾ. ಶೈಲೇಶ್ ಕುಮಾರ್ ನಿರ್ಮಾಣ, ಡಾ. ಶಶಿಕಲಾ ಪುಟ್ಟಸ್ವಾಮಿ ನಿರ್ದೇಶನದ "ಜಯಭೇರಿ ಕನ್ನಡ" ಹಾಡು ಇದೀಗ ಅನೇಕರ ಗಮನವನ್ನು ಸೆಳೆದಿದ್ದು, ಈ ಹಾಡಿನಲ್ಲಿ ಸ್ಯಾಂಡಲ್​ವುಡ್​ನ ನಟ ಯಶಸ್ ಸೂರ್ಯ, ನಟಿ ನಿಶ್ವಿಕಾ ನಾಯ್ಡು ಮತ್ತು ಕಿರಣ್ ರಾಜ್ ಅಭಿನಯಿಸಿದ್ದಾರೆ.

ಈ ಹಾಡಿನ ಕುರಿತಂತೆ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಡಾ. ಶೈಲೇಶ್ ಕುಮಾರ್, "ನಾವೆಲ್ಲಾ ಈಗ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೀವಿ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ "ಜಯಭೇರಿ ಕನ್ನಡ" ಎಂಬ ಹಾಡು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯ ಬಿಡುಗಡೆಗೊಳಿಸಿದರು" ಎಂದು ಹೇಳಿದರು.

"ನಾನು ವೃತ್ತಿಯಲ್ಲಿ ವೈದ್ಯ. ಸಿನಿಮಾ ರಂಗದಲ್ಲಿ ನನಗೆ ಡಾ.ರಾಜಕುಮಾರ್ ಅವರು ಪ್ರೇರಣೆ. ನಮ್ಮ ಶ್ರೀ ನಾಗಬ್ರಹ್ಮ ಕ್ರಿಯೇಷನ್ಸ್ ಲಾಂಛನದಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದ '6ನೇ ಮೈಲಿ' ಚಿತ್ರ ನಿರ್ಮಾಣ ಮಾಡಿದ್ದೆ. ಈಗ 'ತಲ್ವಾರ್ ಪೇಟೆ' ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ. ನನಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಮಾಡಬೇಕೆಂದು ಹಾಗೂ ಕನ್ನಡದ ಮೇಲಿನ ಭಾಷಾಭಿಮಾನದಿಂದ 'ಜಯಭೇರಿ ಕನ್ನಡ' ಎಂಬ ಕನ್ನಡದ ಹಿರಿಮೆ ಸಾರುವ ಹಾಡೊಂದನ್ನು ನಿರ್ಮಾಣ ಮಾಡಿದ್ದೇನೆ" ಎಂದರು.

"ಡಾ. ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಹೇಮಂತ್ ಕುಮಾರ್, ಅನಿರುದ್ದ್ ಶಾಸ್ತ್ರಿ, ಅನುರಾಧ ಭಟ್ ಹಾಡಿದ್ದಾರೆ. ಯಶಸ್ ಸೂರ್ಯ, ನಿಶ್ವಿಕಾ ನಾಯ್ಡು, ಕಿರಣ್ ರಾಜ್, ವೀಣಾ ಪೊನ್ನಪ್ಪ ಸೇರಿ ನಾವೆಲ್ಲರೂ ಈ ಹಾಡಿನಲ್ಲಿ ಅಭಿನಯಿಸಿದ್ದೇವೆ. ಈ ಹಾಡನ್ನು ನಿರ್ಮಾಣ ಮಾಡಿ ಮಾನ್ಯ ಸಚಿವರಾದ ಶಿವರಾಜ್ ತಂಗಡಗಿ ಅವರ ಬಳಿ ಹೇಳಿದಾಗ, ಅವರು ಈ ಹಾಡನ್ನು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದರು" ಎಂದರು.

ಈ ಸಂದರ್ಭದಲ್ಲಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಡಾ. ಶೈಲೇಶ್ ಕುಮಾರ್ ಹೇಳಿದರು. ಇನ್ನು ಹಾಡಿನಲ್ಲಿ ಅಭಿನಯಿಸಿದರ ಬಗ್ಗೆ ಮಾತನಾಡಿದ ನಟಿ ನಿಶ್ವಿಕಾ ನಾಯ್ಡು, "ನನಗೆ ಶೈಲೇಶ್ ಕುಮಾರ್ ಅವರು ಈ ರೀತಿ ಕನ್ನಡದ ಹಾಡೊಂದರಲ್ಲಿ ಅಭಿನಯಿಸಬೇಕೆಂದು ಕೇಳಿದರು. ಕನ್ನಡದ ಮೇಲಿನ ಅಭಿಮಾನದಿಂದ ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಹಾಡು ಚೆನ್ನಾಗಿದೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net