ಸಚಿವೆ ನಿರ್ಮಲಾ ಸೀತಾರಾಮನ್ ಅಳಿಯ ಪಿಎಂಒ ಅಧಿಕಾರಿ; ಇವರಿಗಿರುವ ಮಹತ್ವದ ಜವಾಬ್ದಾರಿ ಏನು? ಇಲ್ಲಿದೆ ಮಾಹಿತಿ…

nirmalasitharaman
Published on

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಪರಕಾಲ ವಾಙ್ಮಯಿ ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದು, ಗುಜರಾತ್‌ನ ನಾಗರಿಕ ಸೇವಾ ಅಧಿಕಾರಿ ಪ್ರತೀಕ್ ದೋಷಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಸಂದರ್ಭದಲ್ಲಿ ಕುಟುಂಬದವರು ಮತ್ತು ಕೆಲವು ಸ್ನೇಹಿತರು ಮಾತ್ರ ಇದ್ದರು. ಯಾವುದೇ ರಾಜಕೀಯ ಪ್ರಮುಖರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ. ಉಡುಪಿ ಅದಮಾರು ಮಠದ ಮಾರ್ಗದರ್ಶನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು.

ಪ್ರತೀಕ್ ದೋಷಿ, ಗುಜರಾತ್ ಮೂಲದವರು. ಅವರು ಸಿಂಗಾಪುರ ಮ್ಯಾನೇಜ್‌ಮೆಂಟ್ ಸ್ಕೂಲ್​ನಿಂದ ಪದವಿ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಸಹಾಯಕರಲ್ಲಿ ಒಬ್ಬರಾದ ಪ್ರತೀಕ್, ಸಂಶೋಧನೆ ಮತ್ತು ಕಾರ್ಯತಂತ್ರದ ವಿಶೇಷ ಕರ್ತವ್ಯ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾರ್ಯದರ್ಶಿ ಮಟ್ಟದ ಹುದ್ದೆ ನೀಡಲಾಗಿದೆ. ಮೋದಿ ತಂಡದ ಪ್ರಮುಖರಲ್ಲಿ ಇವರೂ ಒಬ್ಬರು.

ವೇತನವೆಷ್ಟು?

2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ಪ್ರತೀಕ್ ಅವರು ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಆರಂಭಿಸಿದರು. ಮೋದಿ ಎರಡನೇ ಅವಧಿಗೆ ಪ್ರಧಾನಿಯಾದಾಗ ಜಂಟಿ ಕಾರ್ಯದರ್ಶಿ ಶ್ರೇಣಿಗೆ ನೇಮಕಗೊಂಡರು. ಉನ್ನತ ಅಧಿಕಾರಿಗಳು ಮತ್ತು ಸರ್ಕಾರದ ಪ್ರಮುಖ ವ್ಯಕ್ತಿಗಳ ಮೇಲ್ವಿಚಾರಣೆ ಜವಾಬ್ದಾರಿಯೂ ಪ್ರತೀಕ್ ಮೇಲಿದೆ ಎನ್ನಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ವರೆಗೆ, ಪಿಎಂಒ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ 14ನೇ ಹಂತದ ವೇತನ ವರ್ಗದಲ್ಲಿದ್ದರು. ಪಿಎಂಒ ವೆಬ್‌ಸೈಟ್ ಪ್ರಕಾರ ಅವರ ಮಾಸಿಕ ಮೂಲ ವೇತನ 1,57,600 ಆಗಿದೆ.

ಸಿಎಂ ಆಗಿದಾಗಿನಿಂದಲೂ ಸಾಥ್

ಸಿಂಗಾಪುರ ಮ್ಯಾನೇಜ್‌ಮೆಂಟ್ ಸ್ಕೂಲ್ ಪದವೀಧರರಾದ ಪ್ರತೀಕ್ ದೋಷಿ ಅವರು ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಸಿಎಂಒದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಸಚಿವೆ ನಿರ್ಮಲಾ ಪುತ್ರಿ ಲೇಖಕಿ

ಸೀತಾರಾಮನ್ ಅವರ ಪುತ್ರಿ ಪರಕಾಲ ವಾಹ್ಮಯಿ ಲೇಖಕಿಯಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಪತ್ರಿಕೋದ್ಯಮ ಅಧ್ಯಯನವನ್ನೂ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net