

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹೀರಾನಗರದಲ್ಲಿ ಪಿಐಎ (ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್) ಲಾಂಛನವನ್ನು ಬರೆದಿರುವ ವಿಮಾನದ ಆಕಾರದ ಬಲೂನ್ ಶನಿವಾರ ಪತ್ತೆಯಾಗಿದೆ ಎಂದು ವರದಿಯಾಗಿದೆ.
ವಿಮಾನದಂತೆ ಹೋಲುವ ಕಪ್ಪು ಮತ್ತು ಬಿಳಿ ಬಣ್ಣದ ಬಲೂನ್ನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ. ಸದ್ಯ ಯಾವ ಭಾಗದಿಂದ ಈ ಬಲೂನ್ ಹಾರಿ ಬಂದಿದೆ ಎಂಬುದರ ಬಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಕಳೆದ ಫೆಬ್ರವರಿಯಲ್ಲಿ ಹಸಿರು ಮತ್ತು ಬಿಳಿ ಬಣ್ಣದಿಂದ ಕೂಡಿದ್ದ ವಿಮಾನದ ಆಕಾರದ ಬಲೂನ್ ಶಿಮ್ಲಾದ ಸೇಬಿನ ತೋಟವೊಂದರಲ್ಲಿ ಪತ್ತೆಯಾಗಿತ್ತು. ಇದರಲ್ಲಿ ಪಿಐಎ ಲೋಗೋವನ್ನು ಮುದ್ರಿಸಲಾಗಿತ್ತು.
ಇತ್ತೀಚೆಗೆ ಕೆಲ ತಿಂಗಳುಗಳಿಂದ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್ಗಳು ಹೆಚ್ಚು ಪತ್ತೆಯಾಗುತ್ತಿರುವುದಾಗಿ ವರದಿಯಾಗಿದೆ. ಮೇ 20 ರಂದು, ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಯೋಧರು ಹೊಡೆದುರುಳಿಸಿದ್ದರು. ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ(IB)ಯಲ್ಲಿ ಬಿಎಸ್ಎಫ್ ಯೋಧರು ನಾಲ್ಕು ಪಾಕಿಸ್ತಾನಿ ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದರು. (ಏಜೆನ್ಸೀಸ್)