ರಜಿನಿ ಸರ್ ಕೊಟ್ಟ ಅದೊಂದು ಗಿಫ್ಟ್ ಅವಿಸ್ಮರಣೀಯವಾದುದು ಎಂದ ತಮನ್ನಾ; ಯಾವುದು ಆ ಗಿಫ್ಟ್?

Rajinikath
Published on

ನವದೆಹಲಿ: ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ತಮನ್ನಾ ಭಾಟಿಯಾ ಕಾಂಬಿನೇಷನ್​ನ ಜೈಲರ್ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮುಂದಿನ ಆಗಸ್ಟ್ 10 ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ಚಿತ್ರಕಥೆ ಬರೆದು, ನಿರ್ದೇಶಿಸಿರುವ ಈ ಸಿನಿಮಾ ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಹೀಗಾಗಿ ಚಿತ್ರಮಂದಿರದಲ್ಲಿ ರಜಿನಿ ಫ್ಯಾನ್ಸ್ ಎಂಜಾಯ್ ಮಾಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಇದೀಗ ಚಿತ್ರೀಕರಣ ಮುಗಿದಿದ್ದು, ನಟಿ ತಮನ್ನಾ ಭಾಟಿಯಾ ಅನುಭವ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಲೆಜೆಂಡರಿ ನಟನೊಂದಿಗೆ ತೆರೆ ಹಂಚಿಕೊಂಡಿರುವುದರಿಂದ ಸಿನಿಮಾದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ರಜಿನಿಕಾಂತ್ ನೀಡಿರುವ ವಿಶೇಷವಾದ ಉಡುಗೊರೆಯೊಂದರ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಯಾವುದು ಆ ಗಿಫ್ಟ್?

ರಜಿನಿಕಾಂತ್ ಜತೆಗೆ ನಟಿಸಬೇಕೆಂದು ಕನಸು ಕಂಡಿದ್ದೆ. ಇದೀಗ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಜೈಲರ್ ಸಿನಿಮಾ ಸೆಟ್‌ನಲ್ಲಿ ಕಳೆದ ಕ್ಷಣಗಳನ್ನು ಸದಾ ಕಾಲಕ್ಕೂ ನೆನಪಿಸಿಕೊಳ್ಳುತ್ತೇನೆ. ಚಿತ್ರೀಕರಣದ ಸಂದರ್ಭದಲ್ಲಿ ತಮ್ಮ ಹಸ್ತಾಕ್ಷರ ಹಾಕಿ, ಆಧ್ಯಾತ್ಮಿಕ ಪಯಾಣದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಕ್ಷಣ ಅವಿಸ್ಮರಣೀಯವಾದುದು ಎಂದು ತಮನ್ನಾ ನೆನಪಿಸಿಕೊಂಡಿದ್ದಾರೆ.

ಜೈಲರ್​ನಲ್ಲಿ ಶಿವಣ್ಣ ನಟನೆ

ಭಾರೀ ನಿರೀಕ್ಷೆ ಮೂಡಿಸಿರುವ ಜೈಲರ್ ಸಿನಿಮಾದಲ್ಲಿ ವಿವಿಧ ಭಾಷೆಯ ಸಿನಿಮಾರಂಗದ ಸ್ಟಾರ್ ಕಲಾವಿದರು ರಜಿನಿಕಾಂತ್ ಜತೆ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಹಾಗೂ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net