

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಆಡುತ್ತಿರುವ ಕಪಟ ನಾಟಕವನ್ನು ನಿಲ್ಲಿಸಬೇಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು 15 ದಿನಗಳವರೆಗೆ ಕಾವೇರಿ ನೀರು ಬಿಡಲು ಸುಪ್ರೀಂಕೋರ್ಟ್ ಇಂದು ಆದೇಶ ಹೊರಡಿಸಿದೆ. ಈ ಬಗ್ಗೆ ನಿಖಿಲ್ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದು, ಕಾವೇರಿ ಕನ್ನಡಿಗರ ಹಕ್ಕು, ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ, ಮಳೆ ಕೈಕೊಟ್ಟಿದೆ ಹಾಗೂ ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ ಎಂದು ಟೀಕಿಸಿದ್ದಾರೆ.
ಬ್ರಿಟಿಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ. ಸ್ವಾತಂತ್ರ್ಯ ನಂತರವೂ ಇದು ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ದನಿಯೇ ನನ್ನ ದನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ ಎಂದು ನಿಖುಲ್ ಕುಮಾರಸ್ವಾಮಿ ತಿಳಿಸಿದ್ದಾರೆ.