

ಮಹಾಕುಂಭನಗರ (ಪ್ರಯಾಗ್ರಾಜ್): ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದು, ಇನ್ನೂ ಹಲವು ಕೋಟಿ ಜನರು ಪುಣ್ಯ ಸ್ನಾನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಗಾ ಮತ್ತು ಯಮುನಾ ನದಿಯ ಶುಚಿತ್ವ ಕಾಪಾಡಲು ಸರ್ಕಾರ ಸರ್ವ ಪ್ರಯತ್ನ ನಡೆಸು ತ್ತಿದ್ದು, ಇದಕ್ಕಾಗಿ 1600 ಕೋಟಿ ರೂ. ಖರ್ಚು ಮಾಡುತ್ತಿದೆ.
ಮಹಾಕುಂಭ ಮೇಳದ ಆಯೋಜನೆಗಾಗಿ ಉತ್ತರ ಪ್ರದೇಶ ಸರ್ಕಾರ ಒಟ್ಟು 7000 ರೂ. ಖರ್ಚು ಮಾಡುತ್ತಿದೆ. ಇದರಲ್ಲಿ 1600 ಕೋಟಿ ರೂ.ಗಳನ್ನು ನದಿಗಳ ಶುಚಿತ್ವ ಕಾಪಾಡಲು ಮತ್ತು ತ್ಯಾಜ್ಯ ನಿರ್ವಹಣೆಗಾಗಿ ಬಳಕೆ ಮಾಡಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪ್ರತಿಯೊಂದು ಘಾಟ್ನಲ್ಲೂ ಪ್ರತಿ ದಿನ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಭಕ್ತಾದಿಗಳು ಪೂಜಾ ಸಾಮಗ್ರಿ, ಹೂ ಮತ್ತು ತೆಂಗಿನಕಾಯಿಯನ್ನು ಬಳಸಿ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಇವುಗಳನ್ನು ಸಂಗ್ರಹಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಪೂಜಾ ಸಾಮಗ್ರಿಗಳನ್ನು ನದಿಯಿಂದ ಹೊರ ತೆಗೆಯಲು ವಿಶೇಷ ಯಂತ್ರಗಳನ್ನು ನಿಯೋಜಿಸಲಾಗಿದ್ದು, ಪ್ರತಿ 2 ಗಂಟೆಗೊಮ್ಮೆ ಇವು ನದಿಯನ್ನು ಸ್ವಚ್ಛಗೊಳಿಸುತ್ತವೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿವೇಕ್ ದ್ವಿವೇದಿ ತಿಳಿಸಿದ್ದಾರೆ.
1.45 ಲಕ್ಷ ಶೌಚಗೃಹ ನಿರ್ವಣ: ಶಾಹಿ ಸ್ನಾನದ ದಿನಗಳಲ್ಲಿ ಕನಿಷ್ಠ 50 ಲಕ್ಷ ಭಕ್ತರು ಆಗಮಿಸುತ್ತಾರೆ. ಭಕ್ತರ ಬಳಕೆಗಾಗಿ 1.45 ಲಕ್ಷ ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಹಿ ಸ್ನಾನದ ದಿನಗಳಲ್ಲಿ 1.6 ಕೋಟಿ ಲೀ. ಮಲದ ಕೆಸರು ಮತ್ತು 2.4 ಕೋಟಿ ಲೀ. ಗ್ರೇ ವಾಟರ್ (ಸ್ನಾನ, ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರು) ಅನ್ನು ಸಂಗ್ರಹಿಸಲು 200 ಕಿ.ಮೀ. ಉದ್ದದ ತಾತ್ಕಾಲಿಕ ಒಳಚರಂಡಿ ನಿರ್ವಿುಸಲಾಗಿದೆ. ಇಲ್ಲಿಂದ ಬರುವ ತ್ಯಾಜ್ಯ ನೀರನ್ನು ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ (ಬಾರ್ಕ್) ಮತ್ತು ಇಸ್ರೋದ ತಂತ್ರಜ್ಞಾನಗಳನ್ನು ಬಳಸಿ ಶುದ್ಧೀಕರಿಸಲಾಗುತ್ತಿದೆ.
ಅಮಾವಾಸ್ಯೆಗೆ 10 ಕೋಟಿ ಭಕ್ತರು: ಜನವರಿ 29 ರಂದು ಮೌನಿ ಅಮಾವಾಸ್ಯೆಯ ಪ್ರಯುಕ್ತ ಮಹಾ ಕುಂಭ ಮೇಳದಲ್ಲಿ ಸುಮಾರು 10 ಕೋಟಿ ಭಕ್ತರು ಅಮೃತಸ್ನಾನ ಮಾಡುವ ನಿರೀಕ್ಷೆ ಇದೆ. ಜನವರಿ 13 ರಂದು ಮಹಾಕುಂಭ ಮೇಳ ಆರಂಭವಾಗಿದ್ದು, ಜ. 13 (ಪುಷ್ಯ ಪೂರ್ಣಿಮೆ), ಜ.14 (ಮಕರ ಸಂಕ್ರಾಂತಿ)ರಂದು ಭಕ್ತರು ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದಾರೆ. ಜ.29 ರಂದು, ಫೆಬ್ರವರಿ 3 (ಬಸಂತ ಪಂಚಮಿ), ಫೆ.12 (ಮಾಘ ಪೂರ್ಣಿಮೆ) ಮತ್ತು ಫೆ. 26 (ಮಹಾ ಶಿವರಾತ್ರಿ) ದಿನ ಭಕ್ತರು ಅಮೃತ ಸ್ನಾನ ಮಾಡಲಿದ್ದಾರೆ.
ಸಾಧುಗಳ ಮನ್ ಕೀ ಬಾತ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ಕುಂಭ ಮೇಳದಲ್ಲಿ ಸಾಧುಗಳ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಸೆಕ್ಟರ್ 20ರಲ್ಲಿ ಹರಿ ಧಾರ್ ಸನಾತನ ಸೇವಾ ಟ್ರಸ್ಟ್ನಿಂದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾಧುಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಟಿ ಮಮತಾಗೆ ಕಿನ್ನರ್ ಅಖಾಡದ ನೇತೃತ್ವ: ಬಾಲಿವುಡ್ ನಟಿ ಮಮತಾ ಕುಲಕರ್ಣಿಯನ್ನು ಕಿನ್ನರ್ ಅಖಾಡದ ಮಹಾಮಂಡಲೇಶ್ವರರಾಗಿ ಘೋಷಿಸಲಾಗಿದೆ. 90ರ ದಶಕದಲ್ಲಿ ಬಾಲಿವುಡ್ನಲ್ಲಿ ಹೆಸರು ಮಾಡಿದ್ದ ಮಮತಾ ಈಗ ಆಧ್ಯಾತ್ಮ ದೀಕ್ಷೆ ಸ್ವೀಕರಿಸಿದ್ದು, ಜನವರಿ 24ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ಕಿನ್ನರ್ ಅಖಾಡದ ಸಂಪ್ರದಾಯದಂತೆ ಮಹಾಮಂಡಲೇಶ್ವರರಾಗಿ ನೇಮಕವಾದರು. 2015 ರಲ್ಲಿ ತೃತೀಯ ಲಿಂಗಿಗಳಿಗಾಗಿ ಕಿನ್ನರ್ ಅಖಾಡವನ್ನು ಸ್ಥಾಪಿಸಲಾಗಿತ್ತು. ಮಮತಾ ಮುಖಂಡತ್ವದಲ್ಲಿ ಕಿನ್ನರ್ ಅಖಾಡ ತನ್ನ ಪ್ರಭಾವವನ್ನು ವಿಸ್ತರಿಸಲು ಬಯಸಿದೆ.