

ಎನ್.ಆರ್.ಪುರ: ಪಟ್ಟಣದಲ್ಲಿ ಶನಿವಾರ ಸಂತೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಹಳ್ಳಿಯಿಂದ ಜನರು ಸಂತೆಗಾಗಿ ಪಟ್ಟಣಕ್ಕೆ ಬಂದು ಗೌರಿ, ಗಣೇಶ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಮಹಿಳೆಯರು ಬಳೆಗಳನ್ನು ಕೊಳ್ಳಲು ಬಳೆ ಬೀದಿ ಬದಿ ಬಳಿಯ ಬಳೆ ಅಂಗಡಿ, ್ಯಾನ್ಸಿಸ್ಟೋರ್‌ಗಳಲ್ಲಿ ಜಮಾಯಿಸಿದ್ದರು. ಶನಿವಾರ ಬೆಳಗ್ಗೆಯಿಂದಲೂ ತುಂತುರು ಮಳೆಯಾಗುತ್ತಿತ್ತು.
ತರಕಾರಿ, ಹಣ್ಣು, ಹೂವು ಮಾರಾಟ ಜೋರಾಗಿತ್ತು. ಬಾಳೆಹಣ್ಣು, ಹೂವಿನ ದರ ಹೆಚ್ಚಾಗಿದೆ. ಬೆಲೆ ಏರಿಕೆ ನಡುವೆಯೂ ಜನರು ಅನಿವಾರ್ಯವಾಗಿ ಖರೀದಿಸಬೇಕಾಯಿತು. ಗಣಪತಿ ಪೆಂಡಾಲ್‌ನಲ್ಲಿ ಗಣಪತಿ ವಿಗ್ರಹಗಳನ್ನು ಮಾರಾಟಕ್ಕೆ ಇಡಲಾಗಿದೆ. ಇಲ್ಲೂ ಸಂಘ, ಸಂಸ್ಥೆ ಮತ್ತು ಸಾರ್ವಜನಿಕರು ಗಣಪತಿ ವಿಗ್ರಹ ಖರೀದಿಗೆ ಮುಗಿಬಿದ್ದಿದ್ದರು. ಶನಿವಾರವಾಗಿದ್ದರಿಂದ ಮಧ್ಯಾಹ್ನ ಮಕ್ಕಳು ಗಣಪತಿ ವಿಗ್ರಹಗಳನ್ನು ನೋಡಿ ಖುಷಿ ಪಡುತ್ತಿದ್ದ ದೃಶ್ಯ ಕಂಡು ಬಂತು.