

ಹಾವೇರಿ: ನಗರದ ಹೊರ ಭಾಗದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳ ಮಧ್ಯೆ ದೀಪೋತ್ಸವ ಆಚರಿಸುವ ಮೂಲಕ ಕನಸಿನ ಹಾವೇರಿ ತಂಡ ರಸ್ತೆ ದುರಸ್ತಿಗೆ ಒತ್ತಾಯಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.
ನಗರದ ಹಾನಗಲ್ಲ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆ ಮಧ್ಯೆ ಬಿದ್ದಿರುವ ಬೃಹದಾಕಾರದ ಗುಂಡಿಗಳ ಮಧ್ಯೆ ಸೋಮವಾರ ಸಂಜೆ ದೀಪ ಹಚ್ಚಿ, ಬುಟ್ಟಿಯಲ್ಲಿ ಫ್ಲಾವರ್ ಪಟಾಕಿ ಹಚ್ಚಿ ದೀಪೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಪ್ರಮುಖ ಅಭಿಷೇಕ ಉಪ್ಪಿನ, ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥದಿಂದ ಷಟ್ಪಥ ಮಾಡಲಾಗಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಸೇವಾ ರಸ್ತೆಯನ್ನು ದುರಸ್ತಿ ಮಾಡಿಲ್ಲ. ಸತತ ಮಳೆಯಿಂದ ರಸ್ತೆ ಮಧ್ಯೆ ದೊಡ್ಡಗುಂಡಿ ಬಿದ್ದು ವಾಹನ ಸಂಚಾರವೇ ಸಾಧ್ಯವಿಲ್ಲದಂತಾಗಿದೆ. ಇದರಿಂದ ಅನೇಕ ವಾಹನಗಳು ಗುಂಡಿ ಮಧ್ಯೆ ಸಿಕ್ಕಿಕೊಂಡು ಹಾಳಾದ ಉದಾಹರಣೆಗಳಿವೆ. ಮುಖ್ಯಮಂತ್ರಿಗಳು ಧಮ್ಮು, ತಾಕತ್ತು ಇದ್ದರೆ ಬಿಜೆಪಿ ತಡೆಯುವಂತೆ ಸವಾಲು ಹಾಕಿದ್ದಾರೆ. ಅದಕ್ಕೂ ಮುನ್ನ ಸಿಎಂ ತವರು ಜಿಲ್ಲೆಯ ರಸ್ತೆಗಳನ್ನು ದುರಸ್ತಿ ಮಾಡಿ ಜಿಲ್ಲೆಯ 6ಕ್ಷೇತ್ರಗಳನ್ನು ಗೆದ್ದು ಟಾರ್ಗೆಟ್ 150ತಲುಪಲಿ ಎಂದರು.
ಜಿಲ್ಲಾ ಕೇಂದ್ರ ಹಾವೇರಿಯಿಂದ ಬೆಂಗಳೂರ ಕಡೆಗೆ, ಹುಬ್ಬಳ್ಳಿ ಕಡೆ ಹೋಗುವ ಎಲ್ಲಾ ಸರ್ವೀಸ್ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ದೀಪೋತ್ಸವ ಆಚರಿಸಿದ್ದೇವೆ ಎಂದರು.