ಹಿಂದಿ ದಿವಸ್ ಆಚರಣೆ ಸ್ಥಗಿತಗೊಳಿಸಲು ಆಗ್ರಹ

web
Published on

ಹಾವೇರಿ: ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಐಕ್ಯತೆ ಒಡೆಯುತ್ತಿರುವ ಹಿಂದಿ ದಿವಸ್ ಆಚರಣೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ನಗರದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಭಾರತದ ಒಕ್ಕೂಟ ಸರ್ಕಾರವು ಪ್ರತಿವರ್ಷ ಸೆ. 14ರಂದು ನಮ್ಮ ತೆರಿಗೆ ಹಣದಿಂದ ಹಿಂದಿ ದಿವಸ್ ಆಚರಿಸುತ್ತಾ ಬಂದಿದೆ. ಕೇವಲ ಹಿಂದಿ ದಿವಸ್ ಒಂದನ್ನೇ ಅಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಮೆರೆಸುತ್ತಿದೆ. ಇದನ್ನು ಕರವೇ ಸಂಘಟನೆ ಎರಡು ದಶಕಗಳಿಂದ ಖಂಡಿಸುತ್ತಾ ಬಂದಿದೆ. ಭಾರತ ಸರ್ಕಾರವು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿದೆ. ಇದರಿಂದಾಗಿ ದೇಶದ ಇತರ ಭಾಷೆಗಳ ಭಾಷಿಕರಿಗೆ ಕಲಿಕೆ, ಪ್ರವೇಶ ಪರೀಕ್ಷೆಗಳು, ಉದ್ಯೋಗ ನೇಮಕಾತಿ, ಸಾರ್ವಜನಿಕ ಸೇವೆಗಳಲ್ಲಿ ಬಹಳ ಅನಾನುಕೂಲವಾಗುತ್ತಿದೆ. ಬ್ಯಾಂಕ್ ಹಾಗೂ ಇತರ ಒಕ್ಕೂಟ ಸರ್ಕಾರದ ಇಲಾಖೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಇಂತಹ ತಾರತಮ್ಯ ನೀತಿಗಳಿಂದಾದ ಅನ್ಯಾಯವಾಗುತ್ತಿದೆ ಎಂದು ದೂರಿದರು.
ರಾಜ್ಯ ಕಾರ್ಯದರ್ಶಿ ಕರಿಬಸಯ್ಯ ಎಸ್.ಬಿ., ಮಾತನಾಡಿ, ಕೇಂದ್ರ ಸರ್ಕಾರದ ಹಿಂದಿ ಪರವಾದ ನೀತಿಗಳಿಂದ ಹಿಂದಿ ಭಾಷಿಕರು ದೇಶದ ಯಾವ ರಾಜ್ಯಕ್ಕೆ ಹೋಗಿ ನೆಲೆಸಿದರೆ, ಕೇಂದ್ರ ಸರ್ಕಾರದ ಎಲ್ಲ ಸೇವೆಗಳು ಹಿಂದಿ ಭಾಷೆಯಲ್ಲೇ ಸಿಗುತ್ತವೆ. ಆದರೇ ಒಬ್ಬ ಕನ್ನಡಿಗ, ಒಬ್ಬ ಮಲೆಯಾಳಿ ಅಥವಾ ಇನ್ನಾವುದೇ ಭಾಷೆಗಳ ಜನರಿಗೆ ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಗಳಲ್ಲಿ ಸೇವೆ ಲಭಿಸುವುದಿಲ್ಲ. ಇಂತಹ ತಾರತಮ್ಯಗಳು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತ ಬರುತ್ತಿವೆ. ಕೇಂದ್ರ ಸರ್ಕಾರದ ಅಸಮಾನತೆಯ ಭಾಷಾ ನೀತಿಯಿಂದಾಗಿ ಈ ರೀತಿ ತಾರತಮ್ಯ ನಡೆದುಕೊಂಡು ಬಂದಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಅಸಮಾನತೆಯನ್ನು ತೊಡೆದು ಹಾಕಿ, ಸಮಾನತೆಯನ್ನು ಎತ್ತಿ ಹಿಡಿಯಲು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್‌ಗೆ ನೀಡಿರುವ ಮಾನ್ಯತೆಯನ್ನು ಎಲ್ಲ ಭಾಷೆಗಳಿಗೂ ನೀಡಬೇಕು. ಭಾರತ ಬಹು ಭಾಷೆ, ಸಂಸ್ಕೃತಿ, ಧರ್ಮಗಳ ನಾಡು. ಈ ಬಹುತ್ವ ಸಂಸ್ಕೃತಿ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಸಿಗುವ ಶಿಕ್ಷಣ, ಉದ್ಯೋಗ ವ್ಯವಸ್ಥೆಗಳನ್ನು ಎಲ್ಲ ಭಾಷೆಗಳಿಗೆ ವಿಸ್ತರಿಸಬೇಕು.ಹಿಂದಿ ದಿವಸ್, ಹಿಂದಿ ಸಪ್ತಾಹ್, ಹಿಂದಿ ಪಕ್ವಾಡ್‌ನಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net