

ಬೆಂಗಳೂರು: ಪ್ರತಿನಿತ್ಯ ಬೆಳಕು ನೀಡುವ ಹಾಗೂ ಜೀವರಾಶಿಗಳ ಬೆಳವಣಿಗೆಗೆ ಕಾರಣನಾದ ಸೂರ್ಯನ ಅಧ್ಯಯನದಲ್ಲಿ ಭಾರತೀಯ ವಿಜ್ಞಾನಿಗಳು ಮಹತ್ವದ ಮೈಲಿಗಲ್ಲನ್ನು ದಾಖಲಿಸಿದ್ದು, ಇದರಲ್ಲಿ ಕರ್ನಾಟಕದ ಬೆಂಗಳೂರು ಹಾಗೂ ಗೌರಿಬಿದನೂರಿನ ಪಾತ್ರ ಪ್ರಮುಖವಾದದ್ದು.
ಗೌರಿಬಿದನೂರಿನಲ್ಲಿರುವ ರೇಡಿಯೋ ತರಂಗ ದೂರದರ್ಶಕವನ್ನು ಬಳಸಿ ಬೆಂಗಳೂರಿನ ಭಾರತೀಯ ಖಭೌತಶಾಸ್ತ್ರ ಸಂಸ್ಥೆ(ಐಐಎ) ವಿಜ್ಞಾನಿಗಳು ಸೂರ್ಯನ ಕರೊನಾ ದ್ರವ್ಯ ಉರ್ತÕನೆಯನ್ನು(ಸಿಎಂಇ) ಅತ್ಯಂತ ಸಮೀಪದಿಂದ ಅಧ್ಯಯನ ಮಾಡಿದ್ದಾರೆ.
ಉಪಗ್ರಹಗಳನ್ನು ಕಾಪಾಡಿಕೊಳ್ಳಲು ಮಹತ್ವ: 1.4 ದಶಲಕ್ಷ ಕಿ.ಮೀ. ಗಾತ್ರ ಹೊಂದಿರುವ ಸೂರ್ಯನ ಸುತ್ತ ಅಗಾಧ ಶಾಖವನ್ನು ಹೊಂದಿರುವ ದ್ರವ್ಯರಾಶಿಗಳು ಹೊರಸೂಸುತ್ತಿರುತ್ತವೆ. ಈ ದ್ರವ್ಯರಾಶಿಗಳು ಸೂರ್ಯನ ಮೇಲ್ಮೈನಿಂದ ಬಹುದೂರದವರೆಗೆ ಸಿಡಿಯುತ್ತಿರುತ್ತವೆ. ಸೂರ್ಯನ ಹೊರಪದರವನ್ನು ಕರೊನಾ (ಪ್ರಭಾವಲಯ) ಎನ್ನಲಾಗುತ್ತದೆ. ಕರೊನಾ ಅತಿ ಹೆಚ್ಚಿನ ತಾಪಮಾನವನ್ನು ಹೊಂದಿದ್ದು, ಆಗಿಂದಾಗ್ಗೆ ಅಲ್ಲಿ ದ್ರವ್ಯರಾಶಿಗಳು ಸಿಡಿಯುತ್ತಿರುತ್ತವೆ. ಇದನ್ನು ಕರೊನಾ ದ್ರವ್ಯರಾಶಿ ಉರ್ತÕನೆ ಎನ್ನಲಾಗುತ್ತದೆ. ಸೂರ್ಯನ ಅಯಾಸ್ಕಾಂತೀಯ ಕ್ಷೇತ್ರವು ಮೊದಲ 11 ವರ್ಷ ಅತಿ ಹೆಚ್ಚು ಪ್ರಮಾಣದಲ್ಲಿ, ನಂತರದ 11 ವರ್ಷ ಕಡಿಮೆ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ. ಇದಕ್ಕೆ ಅನುಗುಣವಾಗಿ ತಲಾ 11 ವರ್ಷದಂತೆ ದ್ರವ್ಯರಾಶಿ ಸಿಡಿಯುವಿಕೆಯಲ್ಲೂ ವ್ಯತ್ಯಾಸ ಆಗುತ್ತದೆ. ಈ ಸಿಡಿಯುವಿಕೆಯು ಭೂಮಿಯ ಕಕ್ಷೆಯಲ್ಲಿ ಸ್ಥಾಪಿಸಲಾಗಿರುವ ಉಪಗ್ರಹಗಳನ್ನು ಹಾಳುಗೆಡವುವಷ್ಟು ಸಾಮರ್ಥ್ಯ ಹೊಂದಿರುತ್ತವೆ. ಸಣ್ಣ ಪ್ರಮಾಣದ ಉರ್ತÕನೆ ಉಪಗ್ರಹಗಳ ಸಂಕೇತಗಳನ್ನು ಸ್ಥಗಿತಗೊಳಿಸಿ ಟಿವಿ, ದೂರವಾಣಿಯಂಥ ದೂರಸಂಪರ್ಕ ಉಪಕರಣಗಳನ್ನು ಬ್ಲಾಕ್ಔಟ್ ಮಾಡುತ್ತವೆ. ಶಕ್ತಿಯುತ ಉರ್ತÕನೆ ಉಪಗ್ರಹಗಳ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಳುಗೆಡವಿ ಇಡೀ ಉಪಗ್ರಹವೇ ನಿಷ್ಕ್ರಿಯವಾಗುವಂತೆ ಮಾಡುತ್ತವೆ. ಸೂರ್ಯನ ಸಿಎಂಇಯನ್ನು ಅಧ್ಯಯನ ಮಾಡುವುದರಿಂದ, ಉಪಗ್ರಹಗಳನ್ನು ಕಾಪಾಡಿಕೊಳ್ಳಲು ಸಾಕಷ್ಟು ಸಮಯ ಲಭಿಸುತ್ತದೆ.
ರೇಡಿಯೋ ದೂರದರ್ಶಕದ ಮಹತ್ವ: ಸಾಮಾನ್ಯವಾಗಿ ಆಪ್ಟಿಕಲ್ ದೂರದರ್ಶಕದ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಅತಿ ಹೆಚ್ಚು ತಾಪಮಾನ ಇರುವ ಪ್ರದೇಶವಾದ್ದರಿಂದ, ಕರೊನಾ ಮೇಲ್ಪದರವನ್ನು ಬಿಟ್ಟು ಒಳಗಿನ ಚಟುವಟಿಕೆಯನ್ನು ಅಧ್ಯಯನ ಮಾಡಲು ಈ ದೂರದರ್ಶಕಗಳು ಸಾಮರ್ಥ್ಯ ಹೊಂದಿಲ್ಲ. ಆದರೆ ಗೌರಿಬಿದನೂರಿನಲ್ಲಿ ಸ್ಥಾಪಿಸಲಾಗಿರುವ ರೇಡಿಯೋ ದೂರದರ್ಶಕಗಳು ಸೂರ್ಯನ ಅತ್ಯಂತ ಹತ್ತಿರದ ದ್ರವ್ಯ ಚಟುವಟಿಕೆಯನ್ನು ಅಧ್ಯಯನ ನಡೆಸಿವೆ. ಸೂರ್ಯನ ಚಟುವಟಿಕೆಯನ್ನು ಅರಿಯಲು ಈ ಸಂಶೋಧನೆ ಬಹಳ ಮುಖ್ಯವಾಗುತ್ತದೆ. ‘ಭೂಮಿಯ ಕಡೆಗೆ ಶಾಖವನ್ನು ಹೊರಸೂಸುವ ಈ ಸಿಎಂಇಗಳ ಅಧ್ಯಯನ ಬಹುಮುಖ್ಯವಾದದ್ದು. ರೇಡಿಯೋ ದೂರದರ್ಶಕಗಳನ್ನು ಬಳಸಿ ಅತ್ಯಂತ ಹತ್ತಿರದವರೆಗೆ ಅಧ್ಯಯನ ನಡೆಸಲು ಸಾಧ್ಯವಾಗಿದೆ’ ಎಂದು ಐಐಎ ವಿಜ್ಞಾನಿ ಆರ್. ರಮೇಶ್ ಹೇಳಿದ್ದಾರೆ.
ಮೊದಲನೆಯದಾಗಿ, ನಮ್ಮ ಉಪಗ್ರಹಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳಲು ಈ ಅಧ್ಯಯನ ಬಹಳ ಉಪಕಾರಿಯಾಗುತ್ತದೆ. ಎರಡನೆಯದಾಗಿ, ಇನ್ನೂ ಸೂರ್ಯನ ಕುರಿತು ತಿಳಿಯಬೇಕಾಗಿರುವುದು ಬಹಳಷ್ಟಿದ್ದು, ಈ ನಿಟ್ಟಿನಲ್ಲೂ ಮಹತ್ವದ ಮೈಲುಗಲ್ಲಾಗಿದೆ.
| ಡಾ. ಎಂ.ವೈ. ಆನಂದ್ ಹಿರಿಯ ವೈಜ್ಞಾನಿಕ ಅಧಿಕಾರಿ, ಜವಾಹರಲಾಲ್ ನೆಹರು ತಾರಾಲಯ, ಬೆಂಗಳೂರು