ಸಾಧನೆಗೆ ಗುರಿ ಮುಖ್ಯ

22sgr1 painting
ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಂ.ಎನ್.ದೇವದತ್ತ ಸ್ಮರಣಾರ್ಥ ಸರಸ್ವತಿ ಮೇಜರ್ ನಾಗರಾಜ್ ಕುಟುಂಬದಿಂದ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಬಹುಮಾನ ವಿತರಿಸಿದರು. ವಿಜಯ ಶಂಕರ್, ಸರಸ್ವತಿ ನಾಗರಾಜ್, ಅನಘಾ ನಾಗರಾಜ್, ಶರಣ್ಯ ಇತರರಿದ್ದರು
Published on

ಸಾಗರ: ಯಾವುದೇ ಕೆಲಸದಲ್ಲಿ ಸಕ್ರಿಯತೆ ಬಹಳ ಮುಖ್ಯ. ಯಾರು ಶ್ರದ್ಧೆಯಿಂದ ತಮಗೆ ವಹಿಸಿದ ಕೆಲಸವನ್ನು ಮಾಡುತ್ತಾರೋ ಖಂಡಿತಾ ಅವರಿಗೆ ಅದರಲ್ಲಿ ಯಶಸ್ಸು ಸಿಗುತ್ತದೆ ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.

ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ಎಂ.ಎನ್.ದೇವದತ್ತ ಸ್ಮರಣಾರ್ಥ ಸರಸ್ವತಿ ಮೇಜರ್ ನಾಗರಾಜ್ ಕುಟುಂಬದಿಂದ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಾಡುವ ಕೆಲಸದಲ್ಲಿ ಮೇಲುಕೀಳು ಎಂಬ ಭಾವನೆ ಸರಿಯಲ್ಲ. ಕೆಲಸದಲ್ಲಿ ಸಾಧಿಸುವ ಛಲ ಇರಬೇಕು. ಆಗ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಗುರಿ ಇರಬೇಕು. ಅದನ್ನು ತಲುಪುವ ಮನೋಭೂಮಿಕೆ ಸಿದ್ಧಪಡಿಸಿಕೊಂಡು ಪ್ರಯತ್ನಶೀಲರಾಗಬೇಕು ಎಂದು ಸಲಹೆ ನೀಡಿದರು.

ಮೇಜರ್ ನಾಗರಾಜ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಪ್ರಶಸ್ತಿ ಸ್ವೀಕರಿಸಿದ ಮಕ್ಕಳು ಇನ್ನಷ್ಟು ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದರು. ಶಿಕ್ಷಕ ವಿಜಯ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ನಾಗರಾಜ್, ಅನಘಾ ನಾಗರಾಜ್, ಶರಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net