

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿಯ ಹುಬ್ಬಳ್ಳಿ ಕಾರ್ಯಕಾರಿಣಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ವೇದಿಕೆಯಾಗುವುದು ಬಹುತೇಕ ನಿಚ್ಚಳವಾಗಿದೆ. ಹಲವು ಸಚಿವರ ಕಾರ್ಯವಿಧಾನ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಅತೃಪ್ತಿ ಹೊಂದಿರುವ ಪಕ್ಷದ ವರಿಷ್ಠರು ಭಾರಿ ಸರ್ಜರಿಗೆ ನಿರ್ಧರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದಿನಿಂದ ನಡೆಯಲಿರುವ ಸರಣಿ ಸಭೆಗಳ ಮೂಲಕ ಮಾಹಿತಿ ಸಂಗ್ರಹಣೆಗೆ ಮುಂದಾಗಿದ್ದು ಸಂಕ್ರಾಂತಿ ಬಳಿಕ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ.
ನಾಯಕತ್ವ ಬದಲಾವಣೆ ಕುರಿತ ವದಂತಿಗಳಿಗೆ ಸ್ವತಃ ಸಿಎಂ ಬೊಮ್ಮಾಯಿ ತೆರೆ ಎಳೆದ ಬಳಿಕ ಉನ್ನತ ಮೂಲಗಳ ಪ್ರಕಾರ, ಬದಲಾಗಲಿರುವುದು ನಾಯಕತ್ವವಲ್ಲ ಸಚಿವ ಸಂಪುಟ ಮಾತ್ರ ಎಂಬುದು ಖಚಿತವಾಗಿದೆ. ಹುಬ್ಬಳ್ಳಿ ಸಭೆಗಳಲ್ಲಿ ಭಾಗವಹಿಸಲೆಂದು ರಾಜ್ಯಕ್ಕೆ ಆಗಮಿಸಲಿರುವ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದೆಹಲಿ ನಾಯಕರ ‘ಸಂದೇಶ’ವನ್ನು ಸಿಎಂಗೆ ತಲುಪಿಸಲಿದ್ದಾರೆ. ಸಚಿವರ ಕಾರ್ಯಕ್ಷಮತೆಯ ಮೌಲ್ಯಮಾಪನ ವರದಿ ಜತೆಗೆ ತನ್ನದೇ ನೆಟ್ವರ್ಕ್ನಿಂದ ಮಾಹಿತಿ ತರಿಸಿಕೊಂಡಿರುವ ವರಿಷ್ಠರು ನಿರ್ದಿಷ್ಟ ಕ್ರಮಗಳಿಗೆ ಮುಂದಾಗಿದ್ದಾರೆ. ನಿಗಮ-ಮಂಡಳಿ ಪುನಾರಚನೆ ಸಂದರ್ಭದಲ್ಲಿ ಪ್ರದೇಶ, ಜಿಲ್ಲೆ, ಜಾತಿ ಸರಿದೂಗಿಸುವುದಷ್ಟೇ ಅಲ್ಲ, ಕೆಲವು ಶಾಸಕರಿಗೆ ‘ಸಮಾಧಾನಕರ ಬಹುಮಾನ’ ರೂಪದಲ್ಲಿ ಆದ್ಯತೆ ಸಿಗಲಿದೆ. ಸಚಿವ ಸಂಪುಟದಲ್ಲಿ ಬದಲಾವಣೆಗೆ ಪೂರಕ ಸಿದ್ಧತೆ ಮಾಡಿಕೊಂಡ ಬಳಿಕ ಬೊಮ್ಮಾಯಿ ಮತ್ತೆ ದೆಹಲಿಯಾತ್ರೆ ಕೈಗೊಳ್ಳುವ ಸಾಧ್ಯತೆಗಳಿವೆ.
ಕಾರಣಗಳ ತನಿಖೆ?: ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಬೆಳಗಾವಿ, ಧಾರವಾಡ ಸೇರಿ ಹಲವು ಜಿಲ್ಲೆಗಳಲ್ಲಿ ‘ಹೊಂದಾಣಿಕೆ’ ಪಕ್ಕಾ ಆಗಿರುವ ಮಾಹಿತಿ ಕಲೆಹಾಕಿದ್ದಾರೆ. ಗೆರೆ ಕೊರೆದು ಪಕ್ಷ ರಾಜಕಾರಣ ಮಾಡುವ ಸನ್ನಿವೇಶ ಬಹುತೇಕ ಕ್ಷೇತ್ರಗಳಲಿಲ್ಲ ಎನ್ನುವುದನ್ನು ಪರಿಷತ್ ಫಲಿತಾಂಶ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಗೆಲ್ಲಬೇಕಾದ ಕ್ಷೇತ್ರಗಳನ್ನು ಕಳೆದುಕೊಂಡಿರುವುದಕ್ಕೆ ಕಾರಣಗಳ ತನಿಖೆ ನಡೆದಿದ್ದು, ವರದಿ ಕೈಸೇರಿದ ಬಳಿಕ ಕೆಲವು ಸಚಿವರ ‘ತಲೆದಂಡ’ಕ್ಕೆ ಕಾರಣವೂ ಅಧಿಕೃತವಾಗಲಿದೆ.
ಸಂಕ್ರಾಂತಿ ನಂತರ ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟಿದ್ದು. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎಲ್ಲ ಕೆಲಸಗಳು ಆಗುತ್ತಿವೆ. ಸರ್ಕಾರ ಉತ್ತಮವಾಗಿ ನಡೆಯುತ್ತಿದ್ದು, ಇನ್ನಷ್ಟು ಗಟ್ಟಿ ಆಗುತ್ತದೆ. ಪ್ರತಿಪಕ್ಷಗಳು ಕೂಡ ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಹತಾಶರಾಗುತ್ತಾರೆ. ಯಾರು ತಂಡದಲ್ಲಿ ಇರಬೇಕು, ಯಾರು ಇರಬಾರದು ಎನ್ನುವುದನ್ನು ಸಿಎಂ ನಿರ್ಧಾರ ಮಾಡುತ್ತಾರೆ. | ಡಾ.ಕೆ.ಸುಧಾಕರ್, ಆರೋಗ್ಯ ಸಚಿವ.
ಹೈಕಮಾಂಡ್ ನಿರ್ಧಾರ: ಸಂಪುಟ ವಿಸ್ತರಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಹೈಕಮಾಂಡ್ ಈ ಬಗ್ಗೆ ಗಮನಿಸಲಿದೆ. ಆಡಳಿತ ಮತ್ತು ಪಕ್ಷದ ನಡುವೆ ಸಮನ್ವಯ ಇದೆ. ಮುಂಬರುವ ದಿನಗಳಲ್ಲಿ ಸರ್ಕಾರ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, 2023ಕ್ಕೆ ಬಿಜೆಪಿ ಉತ್ತಮ ಕೆಲಸಗಳು ಹಾಗೂ ಸಾಧನೆಗಳನ್ನು ಜನರ ಮುಂದೆ ಇಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಟ್ರಬಲ್ ಶೂಟರ್ಗೆ ಹೆಚ್ಚುವರಿ ಹೊಣೆ: ಸಂಪುಟದಿಂದ ಮೂವರು ಕಿರಿಕ್ ಸಚಿವರನ್ನು ಕೈಬಿಟ್ಟು, ಖಾಲಿಯಿರುವ ನಾಲ್ಕು ಸ್ಥಾನಗಳ ಜತೆಗೆ ಆರರಿಂದ ಏಳು ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ನಿರ್ಧರಿಸಿದೆ. ಬೊಮ್ಮಾಯಿ ಸಂಪುಟದಲ್ಲಿ ‘ಟ್ರಬಲ್ ಶೂಟರ್’ ಸಚಿವರಿಗೆ ಎರಡು ಖಾತೆ ಸಿಗಲಿವೆ. ವಲಸೆ ಬಂದಿರುವವರ ಪೈಕಿ ಮೂರ್ನಾಲ್ಕು ಸಚಿವರು ಹೆಸರು ತರುತ್ತಿರುವುದರ ಅರಿವು ವರಿಷ್ಠರಿಗಿದೆ. ಮೂಲ ನಿವಾಸಿಗಳ ಪೈಕಿ ಮಲೆನಾಡು ಮೂಲದವರೊಬ್ಬರನ್ನು ಮೊದಲು ಕೈ ಬಿಡಬೇಕೆಂದು ಸಂಘ ಪರಿವಾರವೇ ಒತ್ತಡ ತಂದಿರುವುದನ್ನು ಮೂಲಗಳು ಖಚಿತಪಡಿಸಿವೆ. ಮುಂಬರುವ ಚುನಾವಣೆಗಾಗಿ ಬೊಮ್ಮಾಯಿ ಸಂಪುಟದಲ್ಲಿ ಬದಲಾವಣೆಗಳಾದರೂ ‘ಪ್ರಾತಿನಿಧ್ಯ’ದ ಕಾರಣಕ್ಕೆ ಕೆಲವರ ಸ್ಥಾನ ಅಬಾಧಿತವಾಗಿರಲಿದೆ. ಅಂತಹವರಿಗೆ ನೀಡಿದ ಪ್ರಮುಖ ಖಾತೆಗಳನ್ನು ವಾಪಸ್ ಪಡೆದು, ಹಿರಿತನ ಹಾಗೂ ಸಾಮರ್ಥ್ಯದ ಮಾನದಂಡದ ಪ್ರಕಾರ 2-3 ಸಚಿವರಿಗೆ ಹೆಚ್ಚುವರಿ ಹೊಣೆ ಬೀಳಲಿದೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ, ಆಡಳಿತಕ್ಕೆ ವೇಗದಷ್ಟೇ ಪ್ರತಿಪಕ್ಷಗಳ ಆರೋಪ, ವಾಗ್ದಾಳಿಗೆ ಅಷ್ಟೇ ಸಮರ್ಥವಾಗಿ ಉತ್ತರಿಸುವವರ ‘ಕೊರತೆ’ ವರಿಷ್ಠರ ಕಣ್ಣಿಗೆ ರಾಚಿದೆ. ಹೀಗಾಗಿ ಪ್ರಮುಖ ಖಾತೆಗಳಲ್ಲಿ ಬದಲಾವಣೆ ಅನಿವಾರ್ಯ ಎಂದು ಮೂಲಗಳು ವಿಶ್ಲೇಷಿಸಿವೆ.
ಎರಡೂ ದಿಕ್ಕಿನಲ್ಲಿ ಗಮನ: ಪ್ರಬಲ ಆಕಾಂಕ್ಷಿಗಳು ಖಾಲಿಯಿರುವ 4 ಸ್ಥಾನಗಳತ್ತ ಚಿತ್ತ ಹರಿಸಿರುವುದು ವರಿಷ್ಠರ ಗಮನದಲ್ಲಿದೆ. ‘ಜಾರಕಿಹೊಳಿ’ ಕಗ್ಗಂಟು ಬಿಡಿಸಬೇಕಾಗಿದೆ. ರಮೇಶ್ ಜಾರಕಿಹೊಳಿ ಬದಲಾಗಿ ಬಾಲಚಂದ್ರ ಜಾರಕಿಹೊಳಿ ಕಳೆದ ಬಾರಿ ಅನಾಯಾಸವಾಗಿ ಸಚಿವರಾಗುವ ಅವಕಾಶಗಳಿದ್ದರೂ ‘ಷರತ್ತು’ ಅಡ್ಡಿಪಡಿಸಿತು ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ದೋಷಮುಕ್ತರಾದ ಬಳಿಕ ತಮ್ಮನ್ನು ಮುಂದುವರಿಸುವುದಾದರೆ ಸಚಿವ ಸಂಪುಟ ಸೇರುವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇ ತೊಡಕಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಮನವೊಲಿಸಿ ಸಂಪುಟಕ್ಕೆ ಸೇರಿಸಿಕೊಂಡು, ಮೇಲ್ಮನೆಯಲ್ಲಿ ಲಖನ್ ಜಾರಕಿಹೊಳಿ ಬೆಂಬಲ ಗಿಟ್ಟಿಸಿಕೊಳ್ಳುವ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮೂಲಗಳು ಹೇಳಿವೆ. ಮತ್ತೊಂದೆಡೆ ಕಾಂಗ್ರೆಸ್ನತ್ತ ಹಾರಲು ಸಜ್ಜಾಗಿರುವವರ ಮಾಹಿತಿಯೂ ವರಿಷ್ಠರ ಮುಂದಿದ್ದು ಆ ರೀತಿಯ ಮನಸ್ಥಿತಿಯವರನ್ನು ಕಟ್ಟಿಹಾಕಲು ಕೂಡ ಯೋಜನೆ ರೂಪಿಸಿದ್ದು ಮುಖ್ಯಮಂತ್ರಿಗೆ ಅಗತ್ಯ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.