

ಶೃಂಗೇರಿ: ಯಕ್ಷಗಾನ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನು ಒಳಗೊಂಡ ಸ್ವತಂತ್ರ ಶಾಸೀಯ ಕಲೆ ಎಂದು ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘದ ಅಧ್ಯಕ್ಷ ನಾಗೇಶ್ ಕಾಮತ್ ಹೇಳಿದರು.
ಮಂಗಳವಾರ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಮೀಪ ಏರ್ಪಡಿಸಿದ್ದ 48ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಯಕ್ಷಗಾನ ಕರ್ನಾಟಕದ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಅತ್ಯಂತ ಪ್ರಮುಖ. ಈ ಪಾರಂಪರಿಕ ಕಲಾ ಮೌಲ್ಯಗಳನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸರಿಕಟ್ಟೆ ಶ್ರೀ ಸದ್ಗುರು ಪ್ರೌಢಶಾಲೆ ಪ್ರಾಚಾರ್ಯ ರಜನೀಶ್ ಹೊಳ್ಳ ಕೆಂಪನಮಕ್ಕಿ, ನೈಜ ಕಲಾವಿದ ಯಕ್ಷಗಾನದಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರಲಾರ ಎಂದು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮ ಸಲುವಾಗಿ ರಾಜಾ ರುದ್ರಕೋಪ ಪೌರಾಣಿಕ ಪ್ರಸಂಗ ಜರುಗಿತು.
ಸಭಾ ಕಾರ್ಯಕ್ರಮದಲ್ಲಿ ಭಾಗವತರಾದ ಸದಾನಂದ ಹೆಬ್ಬಾರ್ ಹಿರೇಹತ್ಲು ಅವರನ್ನು ಗೌರವಿಸಲಾಯಿತು. ಕಲಾವಿದರಾದ ಜನಾದರ್ನ ಮಂಡಗಾರು, ಅರಳುಕುಡಿಗೆ ಸುಬ್ರಾವ್, ಉಪಾಧ್ಯಕ್ಷ ವೆಂಕಟೇಶ್ ಆಚಾರ್ಯ, ಕಾರ್ಯದರ್ಶಿ ಎಂ.ಎಸ್.ನರಸಿಂಹಮೂರ್ತಿ, ಸದಸ್ಯರಾದ ಮಂಜುನಾಥ್, ರಮೇಶ್ ಇದ್ದರು.