ಮುಂದಿನ ಅಧಿವೇಶನಕ್ಕೆ ಮತಾಂತರ ಮಸೂದೆ; ಪರಿಷತ್​ನಲ್ಲಿ ಹೈಡ್ರಾಮಾ

xpkjhxcvv
Published on

ಬೆಳಗಾವಿ: ಆಡಳಿತ ಪಕ್ಷದ ಶಾಸಕರ ಕೊರತೆ, ಪರ ಊರಿನಲ್ಲಿದ್ದ ಶಾಸಕರನ್ನು ಕರೆಸುವುದಕ್ಕಾಗಿ ಕಲಾಪ ಮುಂದೂಡಿಕೆ, ಗದ್ದಲ, ಗೊಂದಲದ ನಡುವೆ ವಿಧಾನಪರಿಷತ್ ಕಲಾಪ ಕೊನೆಯಾಯಿತು. ಕಲಾಪದ ಕೊನೆಯ ದಿನ ಮತಾಂತರ ನಿಷೇಧ ಮಸೂದೆ ಮಂಡನೆ, ಪರ್ಯಾಲೋಚನೆ ನಡೆಸಲು ಸರ್ಕಾರ ಬಯಸಿತ್ತಾದರೂ ಪರಿಷತ್​ನ ಕೆಲ ಸದಸ್ಯರು ಚಕ್ಕರ್ ಹೊಡೆದಿದ್ದರು. ಕೊನೆಗೆ ಅವರನ್ನು ದೂರದೂರಿನಿಂದ ಕರೆಸಲಾಯಿತಾದರು ವಿಧೇಯಕ ಪ್ರಕ್ರಿಯೆಯನ್ನು ನಡೆಸದಿರಲು ಕಡೇ ಹಂತದಲ್ಲಿ ಸರ್ಕಾರ ನಿರ್ಧರಿತು. ಹೀಗಾಗಿ ಮುಂಬರುವ ಜಂಟಿ ಅಧಿವೇಶನದಲ್ಲಿ ಈ ವಿಧೇಯಕವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ.

ವಿಧಾನಪರಿಷತ್​ನಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರು ಕೈಕೊಟ್ಟಿದ್ದರಿಂದ ಬಹುಮತದ ಕೊರತೆಯಿಂದ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆಯಿತು. ಮಧ್ಯಾಹ್ನ 3 ಗಂಟೆವರೆಗೆ ಭೋಜನ ವಿರಾಮಕ್ಕೆ ಕಲಾಪ ಮುಂದೂಡಲಾಯಿತು. ಆದರೆ 3.45 ಕಳೆದರೂ ಕಲಾಪ ಆರಂಭ ಆಗದೇ ಇದ್ದಾಗ ಪ್ರತಿಪಕ್ಷ ಸದಸ್ಯರು ಸಭಾಪತಿ ಮುಂದೆ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದರು. ಇಷ್ಟರ ನಡುವೆ ನಿರ್ಗಮಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಅಜೆಂಡಾದೊಂದಿಗೆ ಆಡಳಿತ ಪಕ್ಷ ಚರ್ಚೆಗೆ ಕಾಲಾವಕಾಶ ಮಾಡಿಕೊಟ್ಟಿತು. ಇದು ಪ್ರತಿಪಕ್ಷವನ್ನು ಇನ್ನಷ್ಟು ಕೆರಳಿಸಿತು. ಹೀಗಾಗಿ ಅನಿವಾರ್ಯವಾಗಿ ಸಭಾಪತಿಯವರು ಕಲಾಪ ಪುನರಾರಂಭಿಸಬೇಕಾಯಿತು. ಈ ವೇಳೆ ಬೆಳಗಾವಿಯಿಂದ ವಾಪಸ್ ತೆರಳಲು ನಾವೆಲ್ಲ ವಿಮಾನದ ಟಿಕೆಟ್ ಮಾಡಿಕೊಂಡಿದ್ದೇವೆ, ಏಕೆ ಕಾಲಹರಣ ಮಾಡಲಾಗುತ್ತಿದೆ ಎಂದು ಆಡಳಿತ ಪಕ್ಷವನ್ನು ಪ್ರತಿಪಕ್ಷ ಸದಸ್ಯರು ತರಾಟೆಗೆ ತೆಗೆದುಕೊಂಡರು. ನಾನೂ ಪ್ರಮಾಣ ಮಾಡುತ್ತೇನೆ ಕಾಲಹರಣ ಮಾಡಿಲ್ಲ ಎಂದು ಸಭಾಪತಿ ಹೇಳಿ ತಮ್ಮದೇನು ಪಾತ್ರವಿಲ್ಲ ಎಂದರು.

ಸಂಖ್ಯಾಬಲಕ್ಕಾಗಿ ಆಡಳಿತ ಪಕ್ಷದ ಸದಸ್ಯರ ಬರುವಿಕೆಗಾಗಿ ಸದನ ಮುಂದೂಡಿದ್ದು ಸಂವಿಧಾನಕ್ಕೆ ಅಪಚಾರ. ಒಂದು ವೇಳೆ ಆಡಳಿತ ಪಕ್ಷಕ್ಕೆ ಅವಕಾಶ ನೀಡುವುದಾದರೆ ನಮ್ಮ ಶಾಸಕರನ್ನು ಕರೆಸಲು ನಮಗೂ ಅವಕಾಶ ಕೊಡಬೇಕೆಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಗೂ ನಾರಾಯಣ ಸ್ವಾಮಿ ಆಗ್ರಹಿಸಿದರು. ಕೊನೆಯಲ್ಲಿ ಸಭಾಪತಿ ಬದಲು ಉಪಸಭಾಪತಿ ಅವರು ಪೀಠದಲ್ಲಿ ಕುಳಿತು ಈ ಅಧಿವೇಶನದ ವಿವರ ಓದಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

10 ದಿನ ಕಲಾಪ, 52 ಗಂಟೆ ಕಾಲ ಚರ್ಚೆ: ವಿಧಾನಸಭೆಯ 10 ದಿನಗಳ ಕಲಾಪ ಶುಕ್ರವಾರ ಅಂತ್ಯಗೊಂಡಿದ್ದು, 52 ಗಂಟೆ ಕಲಾಪ ನಡೆದಿದೆ. ಇದರಲ್ಲಿ 5.45 ಗಂಟೆ ಉತ್ತರ ಕರ್ನಾಟಕ ಭಾಗದ ವಿಷಯಗಳ ಮೇಲಿನ ಚರ್ಚೆ ನಡೆದಿದೆ. ಸುವರ್ಣಸೌಧದಲ್ಲಿ ನಡೆದ 11ನೇ ಅಧಿವೇಶನ ಅಂತ್ಯಗೊಳಿಸಿದ ಸಭಾಧ್ಯಕ್ಷರು ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಯನ್ನು ಸಭೆ ಮುಂದೆ ಮಂಡಿಸಿದರು. ಅಧಿವೇಶನದಲ್ಲಿ ಲೆಕ್ಕ ಪರಿಶೋಧನಾ ವರದಿ, ಒಂದು ಹಕ್ಕುಚ್ಯುತಿ ಪ್ರಸ್ತಾವ, ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಮಂಡನೆ ಮಾಡಲಾಗಿದೆ. ಕರ್ನಾಟಕ ಅನಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ವಿಧೇಯಕವನ್ನು ಹಿಂಪಡೆಯಲಾಗಿದೆ. ಧನ ವಿನಿಯೋಗ ವಿಧೇಯಕ ಸೇರಿ 10 ವಿಧೇಯಕಗಳನ್ನು ಮಂಡಿಸಲಾಗಿದೆ. ಕನ್ನಡ ಧ್ವಜಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಸದನ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ನಗರ ಪ್ರದೇಶಗಳಿಗೆ ಹೊಂದಿಕೊಂಡ ಗ್ರಾಮ ಪಂಚಾಯಿತಿಗಳಲ್ಲಿ ತಲೆ ಎತ್ತುತ್ತಿರುವ ಲೇಔಟ್​ಗಳಲ್ಲಿ ನಿಯಮ ಪಾಲನೆ ಆಗುತ್ತಿಲ್ಲ ಎಂದು ಒಪ್ಪಿಕೊಂಡಿರುವ ಸರ್ಕಾರ, ಅದನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವುದಾಗಿ ವಿಧಾನಸಭೆಯಲ್ಲಿ ತಿಳಿಸಿದೆ. ಪ್ರಶ್ನೋತ್ತರ ವೇಳೆ ಕಾಂಗ್ರೆಸ್​ನ ತನ್ವೀರ್ ಸೇಠ್ ಪ್ರಸ್ತಾಪಿಸಿದ ವಿಷಯಕ್ಕೆ ದನಿಗೂಡಿಸಿದ ಸ್ಪೀಕರ್ ಹಾಗೂ ಬಿಜೆಪಿಯ ಕುಮಾರ್ ಬಂಗಾರಪ್ಪ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿ ಅನುಮತಿ ಪಡೆದು ಲೇ ಔಟ್​ಗಳನ್ನು ವ್ಯಾಪಕವಾಗಿ ನಿರ್ವಿುಸಲಾಗುತ್ತಿದೆ. ಮುಂದೆ ನಗರೀಕರಣ ಹೆಚ್ಚಾದಂತೆ ನಗರ ಪ್ರದೇಶಕ್ಕೆ ಈ ಪ್ರದೇಶ ಸೇರಿಕೊಳ್ಳುತ್ತದೆ. ಬಳಿಕ ನಗರಾಭಿವೃದ್ಧಿ ಇಲಾಖೆಗೆ ಸಮಸ್ಯೆ ಪರಿಹರಿಸಲು, ಮೂಲಸೌಕರ್ಯ ಒದಗಿಸಲು ಸಮಸ್ಯೆಯಾಗುತ್ತದೆ.

ಈ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಜಂಟಿಯಾಗಿ ಕ್ರಮಕೈಗೊಳ್ಳಲು ಈಗಲೇ ಎಚ್ಚೆತ್ತುಕೊಳ್ಳಬೇಕೆಂದು ಶಾಸಕರು ಹಾಗೂ ಸ್ಪೀಕರ್ ಸಲಹೆ ನೀಡಿದರು. ಇದಕ್ಕುತ್ತರ ನಿಡಿದ ಸಚಿವ ಬೈರತಿ ಬಸವರಾಜ್, ಸಮಸ್ಯೆ ಆಗುತ್ತಿರುವುದು ಗಮನದಲ್ಲಿದೆ. ಪ್ರಸ್ತುತ ಪಂಚಾಯಿತಿ ಮಟ್ಟದಲ್ಲಿ ಸೃಷ್ಟಿಯಾಗುವ ಲೇಔಟ್​ಗಳಲ್ಲಿ ಅಗತ್ಯ ನಿಯಮ ಪಾಲನೆ ಆಗಿರರಿದ್ದರೆ ಮುಂದೆ ನಮ್ಮ ಇಲಾಖೆಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಶೀಘ್ರವೇ ಹಿರಿಯ ಅಧಿಕಾರಿಗಳ ಸಭೆ ಕರೆದು ಬಿಗಿ ಕ್ರಮ ಕೈಗೊಳ್ಳಲು ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೂ ಮನ್ನ ಪ್ರಶ್ನೋತ್ತರ ವೇಳೆ ತಮಗೆ ಪ್ರಶ್ನೆ ಕೇಳಲು ಅವಕಾಶ ಇದ್ದರೂ ನಡಹಳ್ಳಿ ಸ್ಪೀಕರ್​ಗೆ ಕೈ ಮುಗಿದು ಅಸಮಾಧಾನ ಹೊರಹಾಕಿದ ಪ್ರಸಂಗ ನಡೆಯಿತು. ಉತ್ತರ ಕರ್ನಾಟಕ ವಿಚಾರವಾಗಿ ತಮಗೆ ಮಾತನಾಡಲು ಅವಕಾಶ ಕೊಡಬೇಕು, ಪ್ರಶ್ನೋತ್ತರ ಕಲಾಪವನ್ನು ಮುಂದೂಡಬೇಕು ಎಂದು ದಿನದ ಕಲಾಪ ಆರಂಭದಲ್ಲೇ ನಡಹಳ್ಳಿ ಒತ್ತಾಯಿಸಿದ್ದರು. ಆದರೆ, ಸ್ಪೀಕರ್ ಒಪ್ಪಿರಲಿಲ್ಲ. ಹೀಗಾಗಿ ಪ್ರಶ್ನೋತ್ತರ ಸಂದರ್ಭದಲ್ಲಿ ತಾವು ಪ್ರಶ್ನೆ ಕೇಳುವ ಅವಕಾಶವನ್ನು ನಿರಾಕರಿಸಿ ಕುಳಿತುಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net