

ನವದೆಹಲಿ: ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂಬ ಸಂಕಲ್ಪವನ್ನು ನಮಗಿಂತಲೂ ಹೆಚ್ಚು ಜನರೇ ಮಾಡಿದ್ದಾರೆ. ಉತ್ತಮ ಉದ್ದೇಶ ಹೊಂದಿದವರನ್ನು ಮತದಾರರು ಎಂದಿಗೂ ಕೈಬಿಟ್ಟಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಉತ್ತರಾಖಂಡದ ಅಲ್ಮೋರಾದಲ್ಲಿ ಶುಕ್ರವಾರ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಮೊದಲ
ಹಂತದ ಚುನಾವಣೆಯೊಂದಿಗೆ ಪಂಚ ರಾಜ್ಯ ಚುನಾವಣೆ ಶುರುವಾಗಿದೆ. ಬಿಜೆಪಿ ದಾಖಲೆಯ ಸಂಖ್ಯೆಯಲ್ಲಿ ಗೆಲುವನ್ನು ಸಾಧಿಸುವುದು ಸ್ಪಷ್ಟವಾಗಿದೆ. ಬೆಟ್ಟ ಪ್ರದೇಶಗಳಲ್ಲಿ ರಸ್ತೆ ಮೂಲಸೌಕರ್ಯ ಒದಗಿಸುವುದಕ್ಕಾಗಿ ಕೇಂದ್ರ ಮುಂಗಡ ಪತ್ರದಲ್ಲಿ ನಾವು ಪರ್ವತ ಮಾಲಾ ಯೋಜನೆಯನ್ನು ಘೋಷಿಸಿದ್ದೇವೆ. ಇತ್ತೀಚೆಗೆ ರಾಜ್ಯದಲ್ಲಿ 17000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಚಾರ್ ಧಾಮ್ೆ ತನಕಪುರ=-ಪಿತೋರ್ಗಢ ಸೆಕ್ಷನ್ನಲ್ಲಿ ಎಲ್ಲ ಹವಾಮಾನಗಳಿಗೆ ಒಗ್ಗುವಂತಹ ರಸ್ತೆಯನ್ನು ನಿರ್ವಿುಸಲಾಗುತ್ತಿದೆ. ಈ ದಶಕ ಉತ್ತರಾಖಂಡಕ್ಕೆ ಸೇರಿದ್ದು. ಈ ಅವಕಾಶವನ್ನು ಕೈಚೆಲ್ಲಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.
ಮೋದಿಗೆ ವಂಶಾಡಳಿತದ ಅರಿವಿಲ್ಲ: ರಾಜಕೀಯ ನೇತಾರರು ಯಾರೇ ಆದರೂ, ತಮ್ಮ ರಾಜಕೀಯ ಪರಂಪರೆ ಮುಂದುವರಿಸುವ ಸಂತತಿ ಸಿಗಲಿ ಎಂದೇ ಪ್ರಾರ್ಥಿಸುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಕ್ಕಳೇ ಇಲ್ವಲ್ಲ. ನಿತೀಶ್ ಕುಮಾರ್ ಅವರಿಗೆ ಒಬ್ಬ ಮಗ ಇದ್ದಾನೆ. ಆದರೆ ಆತನಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಆರ್ಜೆಡಿ ನಾಯಕ ಲಾಲು ಪ್ರಸಾದ್ ಲೇವಡಿ ಮಾಡಿದ್ದಾರೆ.
ರಾಹುಲ್ ವಾಗ್ದಾಳಿ: ಗೋವಾ ಜನರ ಗಮನವನ್ನು ನೈಜ ವಿಚಾರಗಳಿಂದ ಬೇರೆ ವಿಷಯಗಳತ್ತ ಸೆಳೆದು ದಾರಿ ತಪ್ಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ನಿರುದ್ಯೋಗ, ಪರಿಸರ ಸಮಸ್ಯೆ ಮುಂತಾದವುಗಳ ಬಗ್ಗೆ ಮಾತನಾಡದೆ, ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರನ್ನು ಸುಖಾಸುಮ್ಮನೆ ಟೀಕಿಸುತ್ತಿದ್ದಾರೆ. ಪ್ರಧಾನಿ ಮೋದಿಗೆ ಅಂದಿನ ಪರಿಸ್ಥಿತಿ ಹೇಗಿತ್ತು ಎಂಬುದರ ಅರಿವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಣಜಿಯಲ್ಲಿನ ಪ್ರಚಾರ ಸಭೆಯಲ್ಲಿ ಆರೋಪಿಸಿದರು.
ದಲಿತ ಮಹಿಳೆ ಹತ್ಯೆ ಎಸ್ಪಿ ವಿರುದ್ಧ ಟೀಕೆ: 2 ತಿಂಗಳ ಹಿಂದೆ ಉನ್ನಾವೋದಿಂದ ನಾಪತ್ತೆಯಾಗಿದ್ದ 22 ವರ್ಷದ ದಲಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಒಂದು ಆಶ್ರಮದ ಹತ್ತಿರ ಸಿಕ್ಕಿದೆ. ಆ ಆಶ್ರಮ ದಿವಂಗತ ಫತೇಹ್ ಬಹಾದುರ್ ಸಿಂಗ್ ಎಂಬುವರರಿಗೆ ಸೇರಿದ್ದು. ಸಿಂಗ್ ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದವರು. ಸಿಂಗ್ ಅವರ ಪುತ್ರ ರಾಜೋಲ್ ಸಿಂಗ್ನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಬಿಜೆಪಿ ಮತ್ತು ಬಿಎಸ್ಪಿ ನಾಯಕರು ಈ ಪ್ರಕರಣವನ್ನು ಮುಂದಿಟ್ಟು ಈಗ ಅಖಿಲೇಶ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ನಾವು ಸಂತ್ರಸ್ತ ಮಹಿಳೆಯ ಕುಟುಂಬದ ಪರವಾಗಿದ್ದೇವೆ ಎಂದು ಅಖಿಲೇಶ್ ಹೇಳಿದ್ದಾರೆ.
ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಬಂಧು ಭೂಪಿಂದರ್ ಸಿಂಗ್ ವಿರುದ್ಧ ಇತ್ತೀಚೆಗಷ್ಟೆ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿತ್ತು. ಈಗ ಆದಾಯ ತೆರಿಗೆ ಇಲಾಖೆಯೂ ಕೇಸ್ ದಾಖಲಿಸಿ ಕ್ರಮ ಜರುಗಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.