

ಬೆಂಗಳೂರು: ಬಸ್, ಕಾರು, ಕ್ಯಾಬ್ಗಳಲ್ಲಿ ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳೆಯರು, ಮಕ್ಕಳು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಖಾಸಗಿ ಮತ್ತು ಸರ್ಕಾರಿ ಸೇರಿ ಎಲ್ಲ ಸಾರ್ವಜನಿಕ ಸಾರಿಗೆ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಸಿಸ್ಟಮ್ (ವಿಎಲ್ಟಿಎಸ್) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರ ಉದ್ದೇಶಿಸಿದೆ.
ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಭಾರಿ ಗಾತ್ರದ ಪ್ರಯಾಣಿಕ ವಾಹನಗಳು ಅತಿ ವೇಗದಿಂದ ಸಂಚರಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ. ವಿಎಲ್ಟಿಎಸ್ ಆಧಾರಿತ ಜಿಪಿಆರ್ಎಸ್ ವ್ಯವಸ್ಥೆಯ ಉಪಕರಣವನ್ನು ವಾಹನಗಳಲ್ಲಿ ಅಳವಡಿಸಿದಲ್ಲಿ ವಾಹನಗಳು ಸಂಚರಿಸುವ ವೇಗ, ನಿಗದಿ ಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆಯೆ ಇತ್ಯಾದಿ ನಿಗಾ ಜತೆಗೆ, ಸಮಾಜಘಾತುಕ ಶಕ್ತಿಗಳಿಂದ ರಕ್ಷಿಸಲು ವಾಹನದ ಸ್ಥಳವನ್ನು ಪತ್ತೆಹಚ್ಚುವ ಕಾರ್ಯವೂ ನೂತನ ತಂತ್ರಜ್ಞಾನದಿಂದ ಸಾಧ್ಯವಾಗಲಿದೆ. ಈ ತಂತ್ರಜ್ಞಾನ ಅಳವಡಿಸುವ ಮಹತ್ವದ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ತೆಗೆದುಕೊಂಡಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕೇಂದ್ರದ ಸಹಭಾಗಿತ್ವದಲ್ಲಿ ಜಾರಿಯಾಗಲಿರುವ ಈ ಯೋಜನೆಗೆ ರಾಜ್ಯ ಸರ್ಕಾರ ಶೇ.40 ಅನುದಾನವನ್ನು ನೀಡಲಿದೆ. 20.35 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಸಂಪುಟ ಒಪ್ಪಿದ್ದು, ರಾಜ್ಯ
ಸರ್ಕಾರ 5.97 ಕೋಟಿ ರೂ. ಬಿಡುಗಡೆ ಮಾಡಲು ಸಮ್ಮತಿಸಲಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಯೋಜನಾ ಸಮಾಲೋಚಕ ರನ್ನು ಹಾಗೂ ಕ್ಲೌಡ್ ಸರ್ವೀಸ್ ಅನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ 4.97 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಒದಗಿಸಲಾದ ಅನುದಾನದಿಂದ ಭರಿಸಲಿದೆ ಎಂದು ಹೇಳಿದರು.
21.22 ಕೋಟಿ ರೂ.ವೆಚ್ಚ: ಕೇಂದ್ರದ ನಿರ್ದೇಶನ ಮೇರೆಗೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ರಾಜ್ಯದ 6.8 ಲಕ್ಷ ವಾಹನಗಳು ಈ ವ್ಯವಸ್ಥೆಗೆ ಒಳಪಡಲಿವೆ. ಜಿಎಸ್ಟಿ ಒಳಗೊಂಡಂತೆ ಬಂಡವಾಳ ವೆಚ್ಚ 9.23 ಕೋಟಿ ರೂ. ಮತ್ತು ಎರಡು ವರ್ಷಗಳ ನಿರ್ವಹಣಾ ವೆಚ್ಚ ಒಳಗೊಂಡಂತೆ 6.21 ಕೋಟಿ ರೂ. ಮತ್ತು ಕ್ಲೌಡ್ ಸರ್ವೀಸ್ ಶುಲ್ಕ 4.97 ಕೋಟಿ, ಒಟ್ಟು ಯೋಜನಾ ವೆಚ್ಚ 20.35 ಕೋಟಿ ರೂ. ಆಗಿದೆ. ಡಿಪಿಆರ್ ಸಿದ್ಧಪಡಿಸಲು ಭರಿಸಲಾದ 81 ಲಕ್ಷ ರೂ. ಒಳಗೊಂಡಂತೆ ಈ ಯೋಜನೆಯ ಒಟ್ಟು ವೆಚ್ಚ 21.22 ಕೋಟಿ ರೂ. ಆಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.
ಪ್ರಯಾಣಿಕರ ವಾಹನಗಳು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ಗಳು ಒಟ್ಟು 4,51,520 (ಮ್ಯಾಕ್ಸಿಕ್ಯಾಬ್-1,16,268, ಮೋಟಾರ್ ಕ್ಯಾಬ್-335209, ಟ್ಯಾಕ್ಸಿ ಕ್ಯಾಬ್-43) ವಾಹನಗಳು. ಪ್ರಯಾಣಿಕರ ಬಸ್ಸುಗಳು 71,248 (ಶಾಲಾ ವಾಹನಗಳು-16432, ಖಾಸಗಿ ಮಜಲು ವಾಹನಗಳು-23077, ಕೆಎಸ್ಸಾರ್ಟಿಸಿ ಮಜಲು ವಾಹನಗಳು-34701, ಒಪ್ಪಂದ ವಾಹನಗಳು-5138, ಅಖಿಲ ಭಾರತ ಪ್ರವಾಸಿ ವಾಹನಗಳು-1900), ರಾಷ್ಟ್ರೀಯ ರಹದಾರಿ ಹೊಂದಿದ ಒಟ್ಟು ಸರಕು ಸಾಗಾಣಿಕೆ ವಾಹನಗಳು 85,949 ಇವೆ.
ಖಾಸಗಿ ವಲಯದ ಸಾರಿಗೆ ವಾಹನಗಳು ಮತ್ತು ಪ್ರವಾಸಿ ವಾಹನಗಳಲ್ಲಿ ಕಡ್ಡಾಯವಾಗಿ ವಿಎಲ್ಟಿಎಸ್ ಅಳವಡಿಸುವುದರಿಂದ ವಾಹನಗಳು ವೇಳಾಪಟ್ಟಿಯನುಸಾರ ಸಂಚಾರ ನಡೆಸುತ್ತಿರುವ ಚಲನವಲನಗಳನ್ನು ಗುರುತಿಸಿ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಬಹುದಾಗಿದೆ.
ವಾಹನಗಳ ಅತಿವೇಗದ ಸಂಚಾರ, ಅಪಘಾತ ಮತ್ತು ತುರ್ತು ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ಒತ್ತುವ ಮೂಲಕ ಮಾಹಿತಿ ನೀಡುವ ಅವಕಾಶ ಕಲ್ಪಿಸಲಾಗುವುದು. ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದರೆ ಕೂಡಲೇ ಆ ವಾಹನದ ವಿಎಲ್ಟಿಎಸ್ (ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ ಸಿಸ್ಟಮ್ ಮಾಹಿತಿಯನ್ನು ಕಂಟ್ರೋಲ್ ರೂಂನಲ್ಲಿಯೇ ಪಡೆದು ಕೊಳ್ಳಬಹುದಾಗಿದೆ. ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆಯೆ? ಇಲ್ಲವೆ? ನಿಗದಿತ ಅವಧಿಯೊಳಗೆ ಆಯಾ ಸ್ಥಳಗಳಿಗೆ ತಲುಪುತ್ತಿವೆಯೆ? ನಿಗದಿತ ಸ್ಥಳದಲ್ಲಿ ನಿಲುಗಡೆ ಆಗುತ್ತಿವೆಯೆ? ಎಂಬ ಇತ್ಯಾದಿ ಮಾಹಿತಿಯನ್ನು ಪಡೆದು ಮೇಲುಸ್ತುವಾರಿ ಮಾಡಲು ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ.
ಒಂದು ವೇಳೆ ಚಾಲಕ ನಿಗದಿತ ಮಾರ್ಗ ಬಿಟ್ಟು ಬೇರೆ ಕಡೆಯಲ್ಲಿ ವಾಹನ ಚಾಲನೆ ಮಾಡುತ್ತಿದ್ದರೂ, ಮಾಹಿತಿ ಪಡೆಯಬಹುದು. ಅನಧಿಕೃತ ವಾಹನಗಳು ಸಂಚಾರ ಮಾಡುತ್ತಿದ್ದರೂ ಪತ್ತೆ ಮಾಡಿ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.