

ನವದೆಹಲಿ: ಕೇಂದ್ರ ಸರ್ಕಾರ ವಿರುದ್ಧ ವಿಪಕ್ಷಗಳು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿನಿತ್ಯವೂ ಗದ್ದಲ ಎಬ್ಬಿಸುತ್ತಿದ್ದ ಹಿನ್ನೆಲೆಯಲ್ಲಿ ಒಂದು ದಿನಕ್ಕೆ ಮುನ್ನವೇ ಎರಡೂ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ರಾಜ್ಯಸಭೆ ಮುಂದೂಡಿದ ವೇಳೆ ಬೇಸರ ವ್ಯಕ್ತಪಡಿಸಿದ ಸಭಾಪತಿ ಎಂ. ವೆಂಕಯ್ಯ ನಾಯ್ಡು, ರಾಜ್ಯಸಭೆ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸಿದೆ. ಅಧಿವೇಶನ ಹೇಗೆ ವಿಭಿನ್ನವಾಗಿರಬೇಕು ಎಂಬ ಬಗ್ಗೆ ನೀವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಿ. ಈ ಬಗ್ಗೆ ವಿಸ್ತಾರವಾಗಿ ಮಾತನಾಡುತ್ತಾ ಹೋದರೆ ನಾನು ಕಟು ಟೀಕೆಗಳನ್ನು ಮಾಡಬೇಕಾದೀತು. ಹೀಗಾಗಿ ಹೆಚ್ಚೇನೂ ಹೇಳಲಾರೆ ಎಂದರು.
ರಾಜ್ಯಸಭೆಯಲ್ಲಿ 12 ಸಂಸದರ ಅಮಾನತು ಹಾಗೂ ಉತ್ತರ ಪ್ರದೇಶದ ಲಖೀಂಪುರ ಖೇರಿ ರೈತ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ನಿತ್ಯವೂ ಪ್ರತಿಭಟನೆ ನಡೆಸುತ್ತಿದ್ದವು. ಕೆಲ ಮಸೂದೆಗಳನ್ನು ತರಾತುರಿಯಲ್ಲಿ ಅನುಮೋದಿ ಸಲಾಗಿದೆ ಎಂದೂ ವಿಪಕ್ಷಗಳು ಗದ್ದಲ ಎಬ್ಬಿಸಿದ್ದವು. ವಿಶೇಷವಾಗಿ, ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ಗೆ ಜೋಡಿಸುವ ಪ್ರಮುಖ ಚುನಾವಣಾ ಸುಧಾರಣಾ ಮಸೂದೆಗೆ ವಿಪಕ್ಷಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದವು.
ಬೆಲೆ ಏರಿಕೆ, ಲಖಿಂಪುರ ಹಿಂಸಾಚಾರ ಸೇರಿ ಹಲವು ವಿಷಯಗಳ ಮೇಲಿನ ವಿರೋಧದಿಂದಾಗಿ ಲೋಕಸಭೆಯಲ್ಲಿ 18 ಗಂಟೆ 48 ನಿಮಿಷಗಳು ವ್ಯರ್ಥವಾದವು. 83 ಗಂಟೆ 12 ನಿಮಿಷಗಳ ಅವಧಿಯ ಕಲಾಪಕ್ಕೆ ಸಾಕ್ಷಿಯಾದ ಲೋಕಸಭೆಯಲ್ಲಿ, ಕರೊನಾ ಸಮಸ್ಯೆ ಮತ್ತು ಹವಾಮಾನ ಬದಲಾವಣೆ ಕುರಿತಾದ ಚರ್ಚೆಗಳು ಕ್ರಮವಾಗಿ 12 ಗಂಟೆ 26 ನಿಮಿಷ ಮತ್ತು 6 ಗಂಟೆ 26 ನಿಮಿಷಗಳ ಕಾಲ ನಡೆಯಿತು. ಕರೊನಾ ಕುರಿತ ಚರ್ಚೆಯಲ್ಲಿ 99 ಸದಸ್ಯರು ಭಾಗವಹಿಸಿದರೆ, ಹವಾಮಾನ ಬದಲಾವಣೆಯ ಮೇಲಿನ ಚರ್ಚೆಯಲ್ಲಿ 61 ಸದಸ್ಯರು ಭಾಗವಹಿಸಿದ್ದರು.
ಕೃಷಿ ಕಾಯ್ದೆ ರದ್ದತಿ ಮಸೂದೆ, ಚುನಾವಣಾ ತಿದ್ದುಪಡಿ ಮಸೂದೆ ಮತ್ತು ಜಾರಿ ನಿರ್ದೇಶನಾಲಯ ಮತ್ತು ಸಿಬಿಐನ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ನಿಗದಿಪಡಿಸುವ ಶಾಸನಗಳು ಸೇರಿ ಒಂಬತ್ತು ಮಸೂದೆಗಳನ್ನು ಲೋಕಸಭೆ ಅಂಗೀಕರಿಸಿದೆ. ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ ಸೇರಿ 12 ವಿಧೇಯಕಗಳನ್ನು ಸರ್ಕಾರ ಅಧಿವೇಶನದಲ್ಲಿ ಮಂಡಿಸಿದೆ. ಲೋಕಸಭೆಯ ಒಟ್ಟಾರೆ ಉತ್ಪಾದಕತೆ ಶೇಕಡಾ 82 ರಷ್ಟಿತ್ತು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.
ಏಕರೂಪದ ಮತದಾರ ಪಟ್ಟಿ?: ಸಂಸತ್ತು, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಾಮಾನ್ಯ ಮತದಾರರ ಪಟ್ಟಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಮನವೊಲಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಜ್ಯಗಳ ಚುನಾವಣಾ ಆಯುಕ್ತ ರೊಂದಿಗೆ ಸಭೆ ನಡೆಸಲು ಚಿಂತನೆ ನಡೆಸಿದೆ. ಬಿಜೆಪಿಯ ರಾಜ್ಯಸಭೆ ಸದಸ್ಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಏಕರೂಪದ ಮತದಾರರ ಪಟ್ಟಿ ಕುರಿತು ಈಗಾಗಲೇ ಚರ್ಚೆ ಮಾಡಿದೆ. ಸಮಿತಿಯಲ್ಲಿರುವ ವಿಪಕ್ಷಗಳ ಸದಸ್ಯರಾದ ಟಿಎಂಸಿಯ ಸುಖೇಂದು ಶೇಖರ್ ರೇ, ಕಾಂಗ್ರೆಸ್ನ ದೀಪೇಂದರ್ ಹೂಡಾ ಮತ್ತು ಡಿಎಂಕೆಯ ಪಿ.ವಿಲ್ಸನ್ ಈ ಪ್ರಸ್ತಾಪಕ್ಕೆ ವಿರೋಧ ಹೊರಹಾಕಿದ್ದಾರೆ. ಇದು ರಾಜ್ಯಗಳ ಹಕ್ಕುಗಳ ಮೇಲಿನ ಅತಿಕ್ರಮಣ ಎಂದಿರುವ ಅವರು ಸಂವಿಧಾನದಡಿಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರವನ್ನು ಮಣಿಸಲು ಕೇಂದ್ರಕ್ಕೆ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಸಾಮಾನ್ಯ ಮತದಾರರ ಪಟ್ಟಿಯಸ್ಥಿತಿಗತಿ ಕುರಿತು ಸಮಿತಿಗೆ ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ರೀಟಾ ವಸಿಷ್ಠ ಮತ್ತು ಚುನಾವಣಾ ಆಯೋಗದ ಪ್ರತಿನಿಧಿಗಳು ಪ್ರಸ್ತುತಿಯನ್ನು ನೀಡಿದ್ದಾರೆ. ರಾಜ್ಯ ಚುನಾವಣಾ ಆಯುಕ್ತರ ಜತೆ ಶೀಘ್ರವೇ ಸಭೆ ನಡೆಸಿ ಸಾಮಾನ್ಯ ಮತದಾರರ ಪಟ್ಟಿಯನ್ನು ಅಳವಡಿಸಿಕೊಳ್ಳಲು ಮನವರಿಕೆ ಮಾಡಲು ಯತ್ನಿಸುವುದಾಗಿ ಕೇಂದ್ರ ಸರ್ಕಾರ ಸಮಿತಿಗೆ ತಿಳಿಸಿದೆ.
ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳಲೆಂದೇ ಉದ್ದೇಶಪೂರ್ವಕವಾಗಿ ರಾಜ್ಯಸಭೆ ಸಂಸದರನ್ನು ಅಮಾನತುಗೊಳಿಸಲಾಯಿತು. ಸುಗಮ ಕಲಾಪ ನಡೆಸುವ ಸಲುವಾಗಿ ಅಮಾನತು ಹಿಂಪಡೆದುಕೊಳ್ಳಿ ಎಂದು ಎಷ್ಟೇ ಮನವಿ ಮಾಡಿದರೂ ಸರ್ಕಾರ ನಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
| ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿಪಕ್ಷ ನಾಯಕ
ಕಲಾಪಗಳನ್ನು ನಡೆಸಲು ಬಿಡದೆ ಪ್ರತಿಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿವೆ. ವಿಪಕ್ಷಗಳೇ ಚರ್ಚೆಯಿಂದ ಓಡಿಹೋಗಿರು ವುದು. ಸ್ಪೀಕರ್ ಚರ್ಚೆಗೆ ಅವಕಾಶ ನೀಡಿದರೂ ಅತ್ಯಂತ ಕೆಟ್ಟದಾಗಿ ವರ್ತಿಸಿ ರೂಲ್ ಬುಕ್ನ್ನು ಹರಿಯಲಾಯಿತು. ವಿನಾಕಾರಣ ಚುನಾವಣೆ ತಿದ್ದುಪಡಿ ಮಸೂದೆಗೆ ತಗಾದೆ ತೆಗೆದು ಗಲಾಟೆ ಮಾಡಿ ಸದನ ನಡೆಯದಂತೆ ನೋಡಿಕೊಂಡರು.
| ಪ್ರಲ್ಹಾದ್ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಪೌರತ್ವಕ್ಕೆ ಪಾಕ್ನಿಂದ ಹತ್ತು ಸಾವಿರ ಅರ್ಜಿ: ಭಾರತದ ಪೌರತ್ವಕ್ಕಾಗಿ ಸಲ್ಲಿಸಿರುವ ಅರ್ಜಿಗಳಲ್ಲಿ ಬಾಕಿ ಇರುವ ಶೇ.70ರಷ್ಟು ಅರ್ಜಿಗಳು ಪಾಕಿಸ್ತಾನದಿಂದ ಬಂದಿವೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಪೌರತ್ವಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸಂಸದ ಅಬ್ದುಲ್ ವಹಾಬ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ, ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ 10,635 (ಡಿ.14ರ ತನಕ) ಅರ್ಜಿದಾರರಲ್ಲಿ 7,306 ಪಾಕಿಸ್ತಾನದಿಂದ ಬಂದವರು ಎಂದು ತಿಳಿಸಿದ್ದಾರೆ.