ಕರ್ನಾಟಕ ಗೃಹ ಮಂಡಳಿ ಎಡವಟ್ಟು:ಸಾವಿರಾರು ಅರ್ಜಿದಾರರು ಕಂಗಾಲು

KHB
Published on

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್​ಬಿ) ಅಧಿಕಾರಿಗಳ ಎಡವಟ್ಟಿನಿಂದಾಗಿ ಠೇವಣಿ ಹಣ ಪಾವತಿಸಿ 7 ವರ್ಷ ಕಳೆದರೂ ನಿವೇಶನ ಸಿಗದೆ ಸಾವಿರಾರು ಜನರು ಕಂಗಾಲಾಗಿದ್ದಾರೆ.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿವೇಶನಕ್ಕೆ ಕಟ್ಟಿರುವ ಹಣ ವಾಪಸ್​ ನೀಡುವುದಾಗಿ ಸಬೂಬು ಹೇಳುತ್ತಿದ್ದಾರೆ. ಆದರೆ ಅರ್ಜಿದಾರರು ಹಣದ ಬದಲು ನಮಗೆ ನಿವೇಶನ ನೀಡುವಂತೆ ಒತ್ತಾಯಿಸಿದ್ದು, ಸಮಸ್ಯೆಗೆ ಪರಿಹಾರ ನೀಡದಿದಲ್ಲಿ ಮುಂಬರುವ ದಿನಗಳಲ್ಲಿ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

2017-18ನೇ ಸಾಲಿನಲ್ಲಿ ಮಂಡಳಿಯು, ವಿವೇಚನಾ ಕೋಟಾ ಅಡಿ ನಿವೇಶನ ಹಂಚಿಕೆ ಸಂಬಂಧ "ಎ', "ಸಿ', "ಬಿ-1', "ಬಿ-2', "ಬಿ-3' ವರ್ಗವಾರು ಅರ್ಜಿ ಆಹ್ವಾನಿಸಲಾಗಿತ್ತು. ರಾಜ್ಯಾದ್ಯಂತ ಸ್ವೀಕೃತವಾದ ಅಂದಾಜು 2 ಸಾವಿರ ಅರ್ಜಿಗಳನ್ನು ವರ್ಗವಾರು ವಿಗಂಡಿಸಿ ಪರಿಶೀಲಿಸಿದ ಮಂಡಳಿ, ಅನುಮೋದನೆಗಾಗಿ ವಸತಿ ಇಲಾಖೆಗೆ ಕಡತ ಸಲ್ಲಿಸಿತ್ತು. ಇದಕ್ಕೂ ಮುನ್ನ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಮಾಡುವ ಕೋಟಾ "ಎ' ಮತ್ತು "ಸಿ' ವರ್ಗ ಎಂದು ಪ್ರಕಟಣೆ ಹೊರಡಿಸಿತ್ತು. ಆದರೆ ಸಮಾಜಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳು ಯಾವ ದಾಖಲೆ ಸಲ್ಲಿಸಬೇಕು ಎಂಬ ಸೂಕ್ತ ಮಾಹಿತಿ ಪ್ರಕಟಣೆಯಲ್ಲಿರಲಿಲ್ಲ. ಇದನ್ನು ಪ್ರಶ್ನಿಸಿ ವಕೀಲ ಭೋಜಪ್ಪ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ಸಲ್ಲಿಸಿದ್ದರು.

2019ರಲ್ಲಿ ಅರ್ಜಿ ವಿಚಾರಿಸಿದ ಹೈಕೋರ್ಟ್​ ಈ ಬಗ್ಗೆ ಆದೇಶ ಹೊರಡಿಸಿತ್ತು. "ಎ' ಹಾಗೂ "ಸಿ' ವರ್ಗದ ಅರ್ಜಿದಾರರು ಮಾನವೀಯತೆ ದೃಷ್ಟಿಯಿಂದ ತಮ್ಮ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿದ ಕೋರ್ಟ್​, ಅರ್ಜಿದಾರರ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೆಎಚ್​ಬಿ ಮತ್ತು ವಸತಿ ಇಲಾಖೆಗೆ ನಿರ್ದೇಶಿಸಿತ್ತು. ಅದಾಗ್ಯೂ ಮಂಡಳಿ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಬೇರೆಡೆ ನಿವೇಶನ ನೀಡಲು ಮನವಿ

ಗೃಹಮಂಡಳಿಯು ನಿವೇಶನ ಹಂಚಿಕೆ ಮಾಡದ ಅರ್ಜಿದಾರರಿಗೆ ಹಿಂದೆ ನಿಗದಿಪಡಿಸಿದ್ದ ಬಡಾವಣೆ ಬದಲು ಬೇರೆ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿರುವ ಸಾಕಷ್ಟು ನಿದರ್ಶನಗಳಿವೆ. ಸೂರ್ಯನಗರ 2ನೇ ಹಂತದಲ್ಲಿ ಸೈಟ್​ ಹಂಚಿಕೆ ಮಾಡುವ ಸಂಬಂಧ ಸಲ್ಲಿಸಿದ್ದ ಅರ್ಜಿದಾರರಿಗೆ 3ನೇ ಹಂತದ ಬಡಾವಣೆಗಳಲ್ಲಿ ನಿವೇಶನ, ಬಿಡದಿಯ ಸುಭಾಷ್​ಚಂದ್ರ ಬೋಸ್​ ಬಡಾವಣೆಯಲ್ಲಿ ಇಡಬ್ಲ್ಯುಎಸ್​ ವರ್ಗದ ಅರ್ಜಿದಾರರಿಗೆ ಎಂಐಜಿ ಮಾದರಿ ಸೈಟ್​ ಹಂಚಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ತಮಗೂ ಬೇರೆಡೆ ನಿವೇಶನ ಕಲ್ಪಿಸುವಂತೆ ಸಾರ್ವಜನಿಕರು ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಎರಡು ದಿನದಲ್ಲೇ ಅಂತಿಮ ವರದಿ

2024ರ ಮಾರ್ಚ್​ನಲ್ಲಿ ಮಂಡಳಿಯು ಬೆಳ್ಳಕೆರೆ ಗ್ರಾಮದಲ್ಲಿ 94 ಎಕರೆ ಜಮೀನಿನಲ್ಲಿ ವಸತಿ ಯೋಜನೆ ಕೈಗೊಂಡಿದ್ದು, 2020ನೇ ಬೇಡಿಕೆ ಸಮೀಕ್ಷೆ ಪ್ರಕಟಣೆ ನೀಡಿ ಸಾರ್ವಜನಿಕರಿಂದ ಆರಂಭಿಕ ಠೇವಣಿ ಹಣದೊಂದಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದೆ. 2024ರ ಮಾ.12ರಂದು ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಇ&ಲಾಟರಿ ಮೂಲಕ ಹಂಚಿಕೆ ಮಾಡಲು ವೇಳಾಪಟ್ಟಿ ನಿಗದಿಪಡಿಸಿದೆ. "ಎ', "ಸಿ', ವರ್ಗದ ಅರ್ಜಿದಾರರಿಗೂ ಇ-ಲಾಟರಿ ಮೂಲಕ ಮೇಲಿನ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ತಮ್ಮ ಹೆಸರು ಸೇರಿಸುವಂತೆ ಪತ್ರದಲ್ಲಿ ತಿಳಿಸಿದ್ದು, ಈ ಅಂಶವನ್ನು ಅರ್ಜಿದಾರರ ಪರ ವಕೀಲರು ಕೋರ್ಟ್​ ಗಮನಕ್ಕೆ ತಂದಿದ್ದಾರೆ. ಈ ವಿಷಯವಾಗಿ ಈಗ ವಾದ-ಪ್ರತಿವಾದ ನಡೆಯುತ್ತಿದ್ದು, ಎರಡು ದಿನದಲ್ಲೇ ಕೋರ್ಟ್​ನಿಂದ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಕ್ರಮಕ್ಕೆ ಒತ್ತಾಯ

* ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳು ಯಾವ ದಾಖಲೆ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿಲ್ಲ.

* ಯಾವ ಇಲಾಖೆಯಿಂದ "ಸಾರ್ವಜನಿಕ ಸೇವೆ' ದಾಖಲೆ ತರಬೇಕು ಎಂದು ಹೇಳಿಲ್ಲ.

* ಹಂಚಿಕೆ ಮಾಡುವ ಸೈಟ್​ಗಳು ಶುದ್ಧ ಕ್ರಯ ಪತ್ರ ಅಥವಾ ಕಂಡಿಷನಲ್​ ಸೇಲ್​ ಡೀಡ್​ ಎಂಬ ಮಾಹಿತಿ ಕೊಟ್ಟಿಲ್ಲ.

* ನೊಂದ ಅರ್ಜಿದಾರರ ಮನವಿ ಪರಿಗಣಿಸಿ ಬೇರೆ ಲೇಔಟ್​ನಲ್ಲಿ ಸೈಟ್​ ಹಂಚಿಕೆಗೆ ಲಾಟರಿ ಮೂಲಕ ಆಯ್ಕೆಗೆ ಪರಿಗಣಿಸಲು ಆಗ್ರಹ.

* ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net