More

  ಶಂಕಿತ ಡೆಂಘೆಗೆ ಎರಡು ಜೀವ ಬಲಿ !; ಜಿಲ್ಲೆಯ ಜನತೆಯಲ್ಲಿ ಹೆಚ್ಚಿದ ಆತಂಕ; ಆರೋಗ್ಯ ಇಲಾಖೆಯಿಂದ ಬೇಕಿದೆ ತುರ್ತು ಚಿಕಿತ್ಸೆ

  ಕೇಶವಮೂರ್ತಿ ವಿ.ಬಿ. ಹಾವೇರಿ
  ಬ್ಯಾಡಗಿ ತಾಲೂಕು ತಡಸ ಗ್ರಾಮದ ಬಾಲನೋರ್ವ ಇತ್ತೀಚೆಗೆ ಶಂಕಿತ ಡೆಂಘೆ ಜ್ವರಕ್ಕೆ ಬಲಿಯಾಗಿದ್ದ ಪ್ರಕರಣದ ನಂತರ, ಹಾವೇರಿ ತಾಲೂಕಿನ ಸಂಗೂರ ಗ್ರಾಮದ ಮತ್ತೋರ್ವ ಬಾಲಕ ಯಶವಂತ ಹುಂಡೇಕಾರ (8) ಮೃತಪಟ್ಟಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಮನೆ ಮನೆ ಲಾರ್ವಾ ಸರ್ವೆ ಹೆಚ್ಚಿಸಿದೆಯಾದರೂ, ಡೆಂಘೆ ನಿಯಂತ್ರಣಕ್ಕೆ ಅಗತ್ಯ ತುರ್ತು ಚಿಕಿತ್ಸೆ ನೀಡುವ ಆಗತ್ಯವಿದೆ.
  ಸಂಗೂರ ಗ್ರಾಮದ ಬಾಲಕ ಯಶವಂತನಿಗೆ ಆರಂಭದಲ್ಲಿ ಜ್ವರ ಪತ್ತೆಯಾಗಿತ್ತು. ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ತೀವ್ರವಾದ ಜ್ವರ, ಮೂರ್ಛೆ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಭಾನುವಾರ ಮೃತಪಟ್ಟಿದ್ದಾನೆ. ಡೆಂಘೆ ಶಂಕೆ ವ್ಯಕ್ತವಾಗಿದ್ದು, ಇನ್ನೂ ಖಚಿತವಾಗಿಲ್ಲ. ಈ ಕುರಿತು ಕಿಮ್ಸ್‌ನಿಂದ ವರದಿ ಪಡೆದು, ಇಲಾಖೆಗೆ ಮಾಹಿತಿ ರವಾನಿಸಲಾಗುವುದು. ಇಲಾಖೆಯಿಂದ ವರದಿ ಬಂದ ನಂತರವಷ್ಟೇ ಡೆಂಘೆ ಹೌದೋ, ಅಲ್ಲವೋ ಎಂಬುದು ಖಚಿತವಾಗಲಿದೆ ಎಂದು ಡಾ.ಸರಿತಾ ಪ್ರತಿಕ್ರಿಯಿಸಿದ್ದಾರೆ.
  ಪ್ರಭಾರ ಡಿಎಚ್‌ಒ ಡಾ.ಜಯಾನಂದ, ಜಿಲ್ಲಾ ರೋಗವಾಹಕಗಳ ಆಶ್ರಿತ ರೋಗಗಳ ಅಧಿಕಾರಿ ಡಾ.ಸರಿತಾ ನೇತೃತ್ವದ ತಂಡ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಕೆಲ ಮನೆಗಳಿಗೆ ತೆರಳಿ ಲಾರ್ವಾ ಸರ್ವೆ ನಡೆಸಿತು. ಮನೆಯ ಸುತ್ತಮುತ್ತ ಎಲ್ಲಿಯೂ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸುವಂತೆ ಗ್ರಾಪಂ ಅಧಿಕಾರಿ, ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಸೊಳ್ಳೆ ಪರದೆ ಬಳಕೆ, ಕುಡಿಯುವ ನೀರಿನ ಪಾತ್ರೆ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಒಣಗಿಸಿ ನಂತರ ಬಳಸುವಂತೆ ಸೂಚಿಸಲಾಗಿದೆ ಎಂದು ಡಾ.ಜಯಾನಂದ ತಿಳಿಸಿದ್ದಾರೆ.
  ದಿನೇಶಗೆ ಕಿಮ್ಸ್‌ನಲ್ಲಿ ಚಿಕಿತ್ಸೆ
  ಶಂಕಿತ ಡೆಂಘೆಗೆ ಅಸುನೀಗಿದ ಸಂಗೂರಿನ ಬಾಲಕ ಯಶವಂತನ ಸಹೋದರ ದಿನೇಶ (9)ನಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈತನ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
  ಹಾನಗಲ್ಲನಲ್ಲಿ 92 ಕೇಸ್ ರಿಕವರಿ
  ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕಿನಲ್ಲೇ ಅತಿ ಹೆಚ್ಚು 92 ಡೆಂಘೆ ಕೇಸ್ ಪತ್ತೆಯಾಗಿದ್ದವು. ಎಲ್ಲ ರೋಗಿಗಳು ರಿಕವರಿ ಆಗುತ್ತಿದ್ದಾರೆ. ಎಲ್ಲೆಡೆ ಲಾರ್ವಾ ಸರ್ವೆ, ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದ ಚಿಕ್ಕಾಂಶಿ ಹೊಸೂರ, ಶಿರಗೋಡ, ತಿಳವಳ್ಳಿ ಭಾಗದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಾನಂದ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
  ಸ್ಥಳೀಯ ಸಂಸ್ಥೆಗಳ ನಿರ್ಲಕ್ಷೃ ?
  ಡೆಂಘೆ ನಿಯಂತ್ರಣವನ್ನು ಕೇವಲ ರೋಗ್ಯ ಇಲಾಖೆಯಿಂದ ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲ. ಇದಕ್ಕೆ ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ, ಗ್ರಾಮ ಪಂಚಾಯ್ತಿ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಸಹಕಾರ ಮುಖ್ಯ. ನಿರಂತರವಾಗಿ ಚರಂಡಿ, ಒಳಚರಂಡಿ ಸ್ವಚ್ಛತೆ, ನಿತ್ಯವೂ ಮನೆಗಳಿಂದ ಕಸ ಸಂಗ್ರಹ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಅತಿ ಮುಖ್ಯ. ಕೆಲವೆಡೆ ಈ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ಡೆಂೆ ಹೆಚ್ಚಳವಾಗುತ್ತಿದೆ. ಕೆಲವೆಡೆ ಕಾಟಾಚಾರದ ಸ್ವಚ್ಛತೆ ನಡೆಯುತ್ತಿದೆ. ಈ ಬಗ್ಗೆ ಸಮಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
  ಕೋಟ್:
  ಡೆಂಘೆ ನಿಯಂತ್ರಣಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಂಗೂರಿನ ಬಾಲಕ ಯಶವಂತ ಮೃತಪಟ್ಟಿರುವುದು ಡೆಂಘೆಯಿಂದಲೇ ಎಂದು ಇನ್ನೂ ಖಚಿತವಾಗಿಲ್ಲ. ಈ ಬಗೆಗಿನ ಎಲ್ಲ ವರದಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರವೇ ಖಚಿತವಾಗಲಿದೆ.
  – ಡಾ.ಜಯಾನಂದ, ಪ್ರಭಾರ ಡಿಎಚ್‌ಒ

  See also  ಕುಡಿತದ ನಶೆಯಲ್ಲಿ ಮೂರನೇ ಮಹಡಿಯಿಂದ ಪತ್ನಿಯನ್ನೇ ಎಸೆದ ಪತಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts