

ಆಲ್ದೂರು: ಮಾನವ ಕುಲವನ್ನು ಒಂದೇ ರೀತಿ ಕಾಣಬೇಕು ಎಂದು ಎಲ್ಲ ಧರ್ಮಗಳೂ ಬೋಧನೆ ಮಾಡಿವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ನವೀಕೃತ ಹಂಝತ್‌ಉಲ್ ಖರ‌್ರಾರ್ ಜುಮ್ಮಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ, ಧರಿಸಿದ ಬಟ್ಟೆ ಆಧಾರದ ಮೇಲೆ ಜಾತಿಯನ್ನು ವಿಂಗಡಿಸಲಾಗುತ್ತಿದೆ ಹೊರತು ಯಾವ ಧರ್ಮ ಗ್ರಂಥಗಳೂ ಇದನ್ನು ಬೋಧನೆ ಮಾಡಿಲ್ಲ. ಭಗವದ್ಗೀತೆ, ಕುರಾನ್, ಬೈಬಲ್ ಇದನ್ನೇ ಸಾರಿವೆ. ಎಲ್ಲ ಧರ್ಮದ ಮೂಲ ತಿರುಳು ಸಮಾನತೆ ಒಂದೇ ಆಗಿದೆ ಎಂದರು.
ಭೂಮಿ ಎಲ್ಲ ಜಾತಿ, ಜನಾಂಗಕ್ಕೆ ಆಶ್ರಯ ಕೊಟ್ಟಿದ್ದು ಪಂಚಭೂತಗಳನ್ನು ನೀಡಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಆದರೆ ಮನುಷ್ಯರ ನಡುವೆ ಸಾಮರಸ್ಯ ಮೂಡದೆ ಅಶಾಂತಿ ವಾತಾವರಣ ನಿರ್ಮಾಣವಾಗಿದೆ ಎಂದರು.
ಕೂದುವಳ್ಳಿ ಲೂರ್ದ್ ಮಾತೆ ಚರ್ಚ್ ಧರ್ಮಗುರು ಡೆಸ್ಸಿಲ್ ಲೋಬೋ ಮಾತನಾಡಿ, ಧರ್ಮ ಎಂದರೆ ಶಾಂತಿಯ ಸಂಕೇತ. ದೇವರನ್ನು ಪ್ರೀತಿಸು, ಪರರನ್ನು ಪ್ರೀತಿಸು ಎಂದು ಕೈಸ್ತ ಧರ್ಮ ಬೋಧನೆ ಮಾಡುತ್ತದೆ. ಈಗ ಎಲ್ಲ ವರ್ಗದವರು ಆಸ್ತಿವಂತರಾಗಿದ್ದಾರೆ. ಆದರೆ ಅವರಲ್ಲಿ ಪ್ರೀತಿ, ವಿಶ್ವಾಸ ಮಾಯವಾಗಿದೆ. ಶಾಂತಿ, ಐಕ್ಯತೆ ಹಾಗೂ ಸಮಾಧಾನದ ಸಾಮ್ರಾಜ್ಯ ಸ್ಥಾಪಿಸುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಹಂಝತ್‌ಉಲ್ ಖರ‌್ರಾರ್ ಜುಮ್ಮಾ ಮಸೀದಿ ಖತೀಬ ಯೂಸ್ ಮದನಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಎಲ್ಲ ಧರ್ಮಗಳ ಸಾರ ದಯೆ, ಶಾಂತಿ ಧರ್ಮವೇ ಆಗಿದೆ. ಆಯಾ ಧರ್ಮಗಳ ಧರ್ಮಗುರುಗಳು ಅವರ ಧರ್ಮದ ಮಹತ್ವ, ಸಾರವನ್ನು ಬೋಧಿಸುತ್ತಾರೆ. ಸರ್ವಧರ್ಮದ ಗುರುಗಳನ್ನು ಕರೆಸಿ ಉದ್ಘಾಟಿಸಿರುವುದು ಸರ್ವಧರ್ಮಗಳ ಸಮ್ಮಿಲನದ ಭಾವೈಕ್ಯತೆಯ ಸಂಕೇತ ಎಂದರು.
ಎಚ್‌ಕೆಜೆಎಂ ಮಸೀದಿ ಅಧ್ಯಕ್ಷ ಬದ್ರುದ್ದೀನ್, ಪ್ರಧಾನ ಕಾರ್ಯದರ್ಶಿ ಮಹಮದ್ ಬೇರಿ, ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ, ಆಲ್ದೂರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರ್, ಮಹಮದ್ ಹನೀಪ್, ಯೂಸ್, ಉಸ್ಮಾನ್, ಸಮಿತಿಯ ಪದಾಧಿಕಾರಿಗಳು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಇದ್ದರು.