

ನವದೆಹಲಿ: ಯುವಜನರು ದೇಶವನ್ನು ಆವಿಷ್ಕಾರ ಕ್ಷೇತ್ರದಲ್ಲಿ ಮುನ್ನಡೆಸುತ್ತಿದ್ದಾರೆ ಹಾಗೂ ಕ್ರೀಡಾರಂಗದಲ್ಲಿ ಅದ್ಭುತ ಸಾಧನೆ ತೋರಿ ದೇಶದ ಗೌರವವನ್ನು ಔನ್ನತ್ಯಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ. ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 80ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿ ಬೆಳೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರಧಾನಿ ತಮ್ಮ ಭಾಷಣದಲ್ಲಿ ಸಂಸ್ಕೃತದಿಂದ ಹಿಡಿದು ಸಂಸ್ಕೃತಿವರೆಗೆ, ಕೃಷ್ಣ ಜನ್ಮಾಷ್ಟಮಿಯಿಂದ ವಿಶ್ವಕರ್ಮ ಪೂಜೆವರೆಗೆ ವೈವಿಧ್ಯಮಯ ವಿಚಾರಗಳನ್ನು ರ್ಚಚಿಸಿದರು. ಎಲ್ಲರ ಪ್ರಯತ್ನದೊಂದಿಗೆ ಈಗಿನ ಪ್ರಗತಿಯನ್ನು ಇನ್ನಷ್ಟು ಮುಂದಕ್ಕೆ ಒಯ್ಯೋಣ ಎಂದ ಅವರು ಇದಕ್ಕೆ ‘ಸಬ್ ಕಾ ಪ್ರಯಾಸ್’ ಎಂಬ ಹೊಸ ಘೋಷಣೆ ನೀಡಿದರು.
ಹೊಸ ತಲೆಮಾರಿನವರು ಬದಲಾಗುತ್ತಿದ್ದು ಗೊತ್ತಿಲ್ಲದ ವಿಷಯಗಳನ್ನು ಆವಿಷ್ಕರಿಸುತ್ತಿದ್ದಾರೆ. ಹೊಸ ಮಾರ್ಗಕ್ಕಾಗಿ ಹಾತೊರೆಯುತ್ತಿದ್ದಾರೆ. ರಿಸ್ಕ್ ತೆಗೆದುಕೊಳ್ಳಲು ಅವರು ಸಿದ್ಧರಿದ್ದಾರೆ. ಹೊಸ ಕ್ಷೇತ್ರಗಳಲ್ಲಿ ನವೋದ್ಯಮ ಆರಂಭಿಸುವ ನಿಟ್ಟಿನಲ್ಲಿ ತಮ್ಮ ಕನಸುಗಳಿಗೆ ರೆಕ್ಕೆ ಹಚ್ಚುತ್ತಿದ್ದಾರೆ. ಬಾಹ್ಯಾಕಾಶ ಕ್ಷೇತ್ರವನ್ನೂ ಮುಕ್ತಗೊಳಿಸಿರುವುದರಿಂದ ದೇಶ ಬದಲಾಗುತ್ತಿದ್ದು ಯುವಜನರು ವಿನೂತನ ಸಾಧ್ಯತೆಗಳನ್ನು ಆವಿಷ್ಕರಿಸುತ್ತಿದ್ದಾರೆ ಎಂದ ಮೋದಿ, ಇವೆಲ್ಲವನ್ನೂ ‘ಸಬ್ ಕಾ ಪ್ರಯಾಸ್’ನ ಹೊಸಮಂತ್ರದೊಂದಿಗೆ ಮುಂದಕ್ಕೊಯ್ಯೋಣ, ದೇಶ ಕಟ್ಟಲು ಪ್ರತಿಯೊಬ್ಬರೂ ಕೊಡುಗೆ ನೀಡೋಣ ಎಂದರು.
ಹಾಕಿ ದಿಗ್ಗಜ ಧ್ಯಾನಚಂದ್ ಜನ್ಮದಿನ (ಆ.29) ಪ್ರಸ್ತಾಪಿಸಿ ಧ್ಯಾನಚಂದ್ ಹೊಸ ಜನಾಂಗಕ್ಕೆ ಹೆಮ್ಮೆಯ ಸಂಕೇತವಾಗಿದ್ದಾರೆ. ಕ್ರೀಡಾಪಟುಗಳಿಗೆ ಪ್ರೇರಣಾಶಕ್ತಿಯಾಗಿದ್ದಾರೆ ಎಂದರು. ಸೋಮವಾರ ನಡೆಯಲಿರುವ ಕೃಷ್ಣ ಜನ್ಮಾಷ್ಟಮಿ ಆಚರಣೆ ಬಗ್ಗೆ ಮಾತನಾಡಿದ ಪ್ರಧಾನಿ, ಕೆಲವು ದಿನಗಳ ಹಿಂದೆ ಗುಜರಾತ್ನ ಸೋಮನಾಥದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದನ್ನು ನೆನಪಿಸಿಕೊಂಡರು. ಗುಜರಾತ್ನ ಭಲ್ಕಾ ತೀರ್ಥದಲ್ಲಿ ಶ್ರೀಕೃಷ್ಣ ಭೂಮಿಯ ಮೇಲೆ ತನ್ನ ಕೊನೆಯ ದಿನಗಳನ್ನು ಕಳೆದಿದ್ದ ಎಂದರು. ಅಮೆರಿಕದಲ್ಲಿ ಜನಿಸಿ ಬೆಳೆದ ಜದುರಾಣಿ ದಾಸಿ ಅವರನ್ನು ತಾವು ಭೇಟಿಯಾಗಿದ್ದನ್ನು ಮೋದಿ ಸ್ಮರಿಸಿದರು. ಜದುರಾಣಿ ಭಕ್ತಿಕಲೆ ಬಗ್ಗೆ ಕೃತಿ ರಚಿಸಿದ್ದು, ಈಗವರು ಇಸ್ಕಾನ್ ಹಾಗೂ ಹರೇ ಕೃಷ್ಣ ಚಳವಳಿಯೊಂದಿಗಿದ್ದಾರೆ. ಆಗಾಗ ಭಾರತಕ್ಕೆ ಭೇಟಿ ನೀಡುತ್ತಾರೆ ಎಂದು ವಿವರಿಸಿದರು.
ಗುಜರಾತ್ನ ಕೆವಾಡಿಯಾದಲ್ಲಿರುವ ಅನೇಕ ರೇಡಿಯೊ ಜಾಕಿಗಳು ಅನುಯಾಯಿ ಗಳೊಂದಿಗೆ ಸಂಸ್ಕೃತದಲ್ಲೇ ಸಂಭಾಷಿ ಸುತ್ತಾರೆ. ಐರ್ಲ್ಯಾಂಡ್ನ ಪ್ರಖ್ಯಾತ ಸಂಸ್ಕೃತ ವಿದ್ವಾಂಸ ರುಟ್ಜರ್ ಕೊರ್ಟೆನ್ಹೋರ್ಸ್ಟ್ ಮೊದಲಾದ ಅನೇಕ ಜನರು ವಿದೇಶಗಳಲ್ಲಿ ಸಂಸ್ಕೃತ ಬೋಧಿಸುವ ಸ್ಪೂರ್ತಿದಾಯಕ ಕೆಲಸ ಮಾಡುತ್ತಿದ್ದಾರೆ ಎಂದರು. ಮುಂದಿನ ಕೆಲ ದಿನಗಳಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ವಿಶ್ವಕರ್ಮ ದೇವತೆಯನ್ನು ಸೃಷ್ಟಿಕರ್ತನ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಯಾರಾದರೂ ಕೌಶಲದಿಂದ ಏನನ್ನಾದರೂ ಸೃಷ್ಟಿಸಿದರೆ; ಅದು ಕಸೂತಿಯೇ ಆಗಲಿ ಸಾಫ್ಟ್ವೇರ್ ಅಥವಾ ಉಪಗ್ರಹ ನಿರ್ವಣವೇ ಆಗಿರಲಿ, ಇವೆಲ್ಲವೂ ವಿಶ್ವಕರ್ಮನ ಅಭಿವ್ಯಕ್ತಿಯಾಗಿರುತ್ತದೆ ಎಂದು ಪ್ರಧಾನಿ ಹೇಳಿದರು.