ಆತ್ಮಾಹುತಿ ಹೊಂಚು, ಬೆಚ್ಚಿಬೀಳಿಸೋ ಸಂಚು!; ಬಿಎಂಟಿಸಿ ಬಸ್ಸು, ರೈಲು ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟಕ್ಕೆ ಪ್ಲ್ಯಾನ್​

Police (2)
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ
Published on

ಬೆಂಗಳೂರು: ಬಿಎಂಟಿಸಿ ಬಸ್ಸು, ರೈಲು ನಿಲ್ದಾಣಗಳು ಸೇರಿ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ 10ಕ್ಕೂ ಹೆಚ್ಚು ಕಡೆ ಬಾಂಬ್ ಸ್ಪೋಟಿಸಲು ಬಂಧಿತ ಶಂಕಿತ ಉಗ್ರರು ಸಂಚು ರೂಪಿಸಿದ್ದರು. ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳ ಸಂಗ್ರಹ ಕಾರ್ಯ ನಡೆದಿತ್ತು. ಬಾಂಬ್ ಸ್ಪೋಟದ ಜತೆಗೆ ಆತ್ಮಾಹುತಿ ದಾಳಿ ನಡೆಸುವ ಮುಖೇನ ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವ ಉದ್ದೇಶ ಹೊಂದಿದ್ದ ಸಂಗತಿ ಬಯಲಾಗಿದೆ.

ಜನ ಸಂದಣಿ ಸ್ಥಳಗಳಲ್ಲಿ ಸ್ಫೋಟ ಮಾಡುವ ಉದ್ದೇಶದಿಂದ ಗ್ರೆನೇಡ್ ಸಂಗ್ರಹಿಸಿದ್ದರು. ಬಂಧಿತರ ಹೆಚ್ಚಿನ ವಿಚಾರಣೆ ನಡೆಸಿದಾಗ 4 ಗ್ರೆನೇಡ್​ಗಳು ಪತ್ತೆಯಾಗಿವೆ. ನಾಲ್ಕೈದು ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದರು ಎನ್ನಲಾಗಿದೆ. ಆದರೆ, ಗ್ರೆನೇಡ್​ಗಳು ಶಂಕಿತರಿಗೆ ಎಲ್ಲಿಂದ ಲಭ್ಯವಾಗಿವೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಬಂಧಿತ ಶಂಕಿತ ಉಗ್ರರು ಪೊಲೀಸ್ ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ. ವಿದೇಶದಲ್ಲಿರುವ ಜುನೇದ್ ಮತ್ತು ಜೈಲಿನಲ್ಲಿರುವ ನಾಸೀರ್ ಹೇಳಿದಂತೆ ತಾವು ಕೆಲಸ ಮಾಡುತ್ತಿದ್ದು, ಎಲ್ಲಿ ಯಾವಾಗ ಏನು ಮಾಡಬೇಕೆಂದು ಹೇಳುತ್ತಿದ್ದರು. ಅದರಂತೆ ನಾವೆಲ್ಲ ಸಭೆ ಸೇರಿ ತಯಾರಿ ನಡೆಸುತ್ತಿದ್ದೆವು. ವಿಧ್ವಂಸಕ ಕೃತ್ಯ ಎಲ್ಲಿ ಮತ್ತು ಹೇಗೆ ನಡೆಸಬೇಕೆಂದು ಈವರೆಗೆ ಯಾವುದೇ ಸೂಚನೆ ಬಂದಿರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬಿಎಂಟಿಸಿ ಬಸ್​ನಲ್ಲಿ ಸ್ಫೋಟ ಅಥವಾ ದಾಳಿ ನಡೆಸುವುದರ ಬಗ್ಗೆ ಸಂಚು ರೂಪಿಸಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಬಸ್, ರೈಲು ನಿಲ್ದಾಣ ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಯಾಟಲೈಟ್ ಫೋನ್​ನಲ್ಲಿ ಮಾತು: ಇತ್ತೀಚೆಗಷ್ಟೇ ನಾಡ ಪಿಸ್ತೂಲ್, ಜೀವಂತ ಗುಂಡುಗಳು, ಸ್ಯಾಟಲೈಟ್ ಫೋನ್ ಬಂಧಿತರ ಕೈ ಸೇರಿದ್ದವು ಎನ್ನಲಾಗಿದೆ. ಜುನೇದ್ ಮತ್ತು ನಾಸೀರ್ ಸೂಚನೆ ಮೇರೆಗೆ ಈ ಶಸ್ತ್ರಾಸ್ತ್ರಗಳು ಶಂಕಿತರ ಕೈ ಸೇರಿದ್ದವು. ಇವುಗಳನ್ನು ಯಾರು ಎಲ್ಲಿಂದ ತಂದು ಕೊಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಉಗ್ರರ ಮಾತುಕತೆಗಾಗಿ ಸ್ಯಾಟಲೈಟ್ ಫೋನ್​ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಗೊತ್ತಾಗಿದೆ.

ಮಾಸ್ಟರ್​ವೆುೖಂಡ್​ಗಳು ಮಧ್ಯಪ್ರಾಚ್ಯ, ಜೈಲಿನಲ್ಲಿ: ಶಂಕಿತರ ಗ್ಯಾಂಗ್​ಗೆ ಜುನೇದ್ ಅಹಮದ್​ನೇ ಸೂತ್ರದಾರ. ಈ ಹಿಂದೆ ಮೂರು ಬಾರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಇದೀಗ ಎಲ್​ಇಟಿ ಸಂಪರ್ಕ ಸಾಧಿಸಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಆರ್.ಟಿ.ನಗರ ಬಳಿಯ ಸುಲ್ತಾನ್​ಪಾಳ್ಯದ ಕನಕನಗರ ನಿವಾಸಿಯಾದ ಜುನೇದ್ ಅಹಮದ್ 2017ರಲ್ಲಿ ಅಪಹರಣ ಮತ್ತು ಕೊಲೆ, 2020ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಡಕಾಯಿತಿಗೆ ಸಂಚು, ಮತ್ತೆ 2021ರಲ್ಲಿ ದರೋಡೆಗೆ ಸಂಚು ಪ್ರಕರಣಗಳಲ್ಲಿ ಜೈಲು ಸೇರಿದ್ದ.

ಜೈಲಿಗೆ ಹೋದ ಸಮಯದಲ್ಲಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ ಟಿ. ನಾಸೀರ್​ನನ್ನು ಭೇಟಿ ಮಾಡಿ ಎಲ್​ಇಟಿ ಸಂಪರ್ಕ ಗಟ್ಟಿ ಮಾಡಿಕೊಂಡಿದ್ದ. ಇದಾದ ಮೇಲೆ 2021ರಲ್ಲಿ ಜಾಮೀನು ಪಡೆದು ಹೊರಬಂದ ಮೇಲೆ ವಿದೇಶಕ್ಕೆ ಪರಾರಿಯಾಗಿದ್ದಾನೆ. 2017ರ ಅಕ್ಟೋಬರ್ 10ರಂದು ಆರ್​ಟಿ ನಗರದಲ್ಲಿ ವ್ಯಾಪಾರದ ವೈಷಮ್ಯಕ್ಕೆ ನೂರ್ ಅಹಮ್ಮದ್, ಕಾಲೂ ಮತ್ತು ಮುದಾಸೀರ್ ಎಂಬುವರನ್ನು ಜುವೇದ್ ಮತ್ತು ಆತನ 20 ಸಹಚರರು ಅಪಹರಣ ಮಾಡಿದ್ದರು. ಗೋವಿಂದಪುರ, ನಾಗವಾರ ಎಲ್ಲೆಡೆ ಸುತ್ತಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಿಟ್ಟಿದ್ದರು. ಹಲ್ಲೆಯಿಂದಾಗಿ ನೂರ್ ಅಹಮ್ಮದ್ ಮೃತಪಟ್ಟಿದ್ದ.

ಚಾಲಕ, ಮೆಕ್ಯಾನಿಕ್​ಗಳ ಸೋಗು: ಬಂಧಿತ ಐವರು ಶಂಕಿತರು ಕ್ಯಾಬ್ ಚಾಲಕ ಮತ್ತು ಮೆಕಾನಿಕ್ ಸೋಗಿನಲ್ಲಿ ಜೀವನ ನಡೆಸುತ್ತಿದ್ದರು. ಮತ್ತೊಂದೆಡೆ ಗೌಪ್ಯವಾಗಿ ಜುವೇದ್ ಮತ್ತು ನಾಸೀರ್ ಜತೆಗೆ ಸಂಪರ್ಕದಲ್ಲಿ ಇದ್ದುಕೊಂಡು ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸುತ್ತಿದ್ದರು.

ನಟೋರಿಯಸ್ ನಾಸೀರ್: ಕೇರಳದ ಮಣ್ಣಂಪುರಂ ಮೂಲದ ಟಿ. ನಾಸೀರ್, ತನ್ನ 16 ವರ್ಷ ವಯಸ್ಸಿನಲ್ಲೇ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್​ವೆುೖಂಡ್, ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸೀರ್ ಮದನಿ ಸಂಪರ್ಕ ಸಾಧಿಸಿದ್ದ. ಇದಾದ ಮೇಲೆ ಎಲ್​ಇಟಿ ಸಂಪರ್ಕ ಮಾಡಿ ದಕ್ಷಿಣ ಭಾರತ ಕಮಾಂಡರ್ ಆಗಿದ್ದ. ಈತನಿಗೆ ಉಮ್ಮರ್ ಹಜಿ ಎಂಬ ಹೆಸರು ಕೂಡ ಇದೆ. ಉಗ್ರ ಸಂಘಟನೆಗಳಿಗೆ ಕೇರಳದ ಮುಸ್ಲಿಂ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಮದನಿ ಮತ್ತು ನಾಸೀರ್ ಸಹಚರರು 2008ರ ಜುಲೈ 25ರ ಮಧ್ಯಾಹ್ನ 1.20ರಲ್ಲಿ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟಗೊಳಿಸಿದ್ದರು. ಓರ್ವ ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದಾದ ಮೇಲೆ ಬಾಂಗ್ಲಾದೇಶದಲ್ಲಿ ನಾಸೀರ್ ತಲೆಮರೆಸಿಕೊಂಡಿದ್ದ. ಬಾಂಗ್ಲಾದೇಶದ ಪೊಲೀಸರು ಬಾಂಗ್ಲಾದೇಶ ಮತ್ತು ಮಯನ್ಮಾರ್ ಗಡಿಯಲ್ಲಿ ನವೆಂಬರ್ 2009ರಲ್ಲಿ ಭಾರತದ ಪೊಲೀಸರಿಗೆ ಒಪ್ಪಿಸಿದ್ದರು. ಕೇರಳದ ಹಲವು ಅಪರಾಧ ಕೃತ್ಯಗಳಲ್ಲಿ ನಾಸೀರ್ ಕೈವಾಡ ಇರುವುದು ಬೆಳಕಿಗೆ ಬಂದಿವೆ.

ಸಿಸಿಬಿ ಎಸಿಪಿಯಿಂದ ದೂರು: ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ, ಶಂಕಿತರ ವಿರುದ್ಧ ಹೆಬ್ಬಾಳ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ನಾಸೀರ್, ಜುವೇದ್ ಸೇರಿದಂತೆ ಏಳು ಮಂದಿ ವಿರುದ್ಧ ಯುಎಪಿಎ, ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆ, ಐಪಿಸಿ ಸೆಕ್ಷನ್ 122ಎ, 121 ಮತ್ತು 122ರ ಅನ್ವಯ ಎಫ್​ಐಆರ್ ದಾಖಲು ಮಾಡಲಾಗಿದೆ.

ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ: ಎಲ್​ಇಟಿ ಉಗ್ರ ಸಂಘಟನೆಯ ಶಂಕಿತರ ಬಂಧನ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳಾದ ಎನ್​ಐಎ, ಇಡಿ ಮತ್ತು ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಲಾಗಿದೆ. 2021ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೇದ್, ಬಂಧನಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಒದಗಿಸಿ ಸಹಾಯ ಕೋರಲಾಗುತ್ತಿದೆ. ಶಂಕಿತ ಆರೋಪಿಗಳ ಜತೆಗೆ ಯಾರೆಲ್ಲ ಸಂಪರ್ಕದಲ್ಲಿ ಇದ್ದಾರೆ ಎಂಬುದರ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳ ಸಹಾಯದಿಂದ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ.

ಮಸೀದಿ ಪಕ್ಕದಲ್ಲಿ ಸಭೆ: ಟಿ.ನಾಸೀರ್ ಮತ್ತು ಜುನೇದ್ ಸಂಪರ್ಕದಲ್ಲಿದ್ದ ಐವರು ಶಂಕಿತರು ನಿರಂತರವಾಗಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸುತ್ತಿದ್ದರು. ಈ ಸಲುವಾಗಿ ಸುಲ್ತಾನ್​ಪಾಳ್ಯದ ಕನಕನಗರದಲ್ಲಿ ಮಸೀದಿ ಪಕ್ಕದಲ್ಲಿರುವ ಸುಹೇಲ್ ಅಹಮದ್, ಮನೆಯಲ್ಲಿ ಸಭೆ ನಡೆಸುತ್ತಿದ್ದರು. ಇತ್ತೀಚೆಗೆ ತಲುಪಿದ್ದ ಪಿಸ್ತೂಲ್ ಮತ್ತು ಜೀವಂತ ಗುಂಡುಗಳ, ಸ್ಯಾಟಲೈಟ್ ಫೋನ್ ಬಳಕೆ ಮತ್ತು ಯಾವೆಲ್ಲ ಸಲಕರಣೆ ಅಗತ್ಯ ಇವೆ ಎಂಬುದರ ಬಗ್ಗೆ ಚರ್ಚೆ ನಡೆಸಲು ಸುಹೇಲ್ ಮನೆಯಲ್ಲಿ ಮಂಗಳವಾರ ರಾತ್ರಿ ಸಭೆ ಸೇರಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಎಸ್.ಡಿ. ಶರಣಪ್ಪ ಸಾರಥ್ಯದಲ್ಲಿ ಎಸಿಪಿಗಳಾದ ಧಮೇಂದ್ರ, ನವೀನ್ ಕುಲಕರ್ಣಿ, ಇನ್​ಸ್ಪೆಕ್ಟರ್ ಡಾ. ಸುಧಾಕರ್, ಮಹದೇವಸ್ವಾಮಿ ಸೇರಿ ವಿಶೇಷ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸಿಸಿಬಿ ತನಿಖೆಗೆ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕರ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ವಿಧಾನಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರು ಶಂಕಿತರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಹಲವು ದಿನಗಳಿಂದಲೂ ಶಸ್ತ್ರಾಸ್ತ್ರ, ಮದ್ದುಗುಂಡು, ಸಲಕರಣೆ ಸೇರಿ ಹಲವು ವಸ್ತುಗಳನ್ನು ಸಂಗ್ರಹಿಸಿ ದೇಶದ ಏಕತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಧ್ವಂಸಕ ಕೃತ್ಯ, ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ವಿಧ್ವಂಸಕ ಕೃತ್ಯ ನಡೆಸುವ ಸಂಚಿನಲ್ಲಿ ಇವರು ಭಾಗಿಯಾಗಿದ್ದರು. ಈ ಹಿಂದೆ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲೂ ಇವರ ಪಾತ್ರ ಪತ್ತೆ ಮಾಡಲಾಗಿದೆ. ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದ ಈ ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ ಸಂಭವನೀಯ ದಾಳಿಯನ್ನು ತಡೆದಿದ್ದಾರೆ ಎಂದು ಶ್ಲಾಘಿಸಿದರು.

ಬಂಧಿತರು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜತೆ ನಿಕಟ ಸಂಪರ್ಕದಲ್ಲಿರುವುದು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಅನುಸರಿಸಿದ ಮಾರ್ಗಗಳು ಹಾಗೂ ಯಾವ ರೀತಿಯ ವಿಧ್ವಂಸಕ ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದರು ಎಂಬ ವಿಚಾರಗಳ ತನಿಖೆಗೆ ಪ್ರಕರಣವನ್ನು ಸಿಸಿಬಿಗೆ ಒಪ್ಪಿಸಿರುವುದಾಗಿ ಡಾ. ಪರಮೇಶ್ವರ್ ತಿಳಿಸಿದರು.

ಶಂಕಿತರನ್ನು ಬಂಧಿಸಿದ ಕ್ರಮ ಸ್ವಾಗತಾರ್ಹ. ಸಂಬಂಧಿಸಿದ ಇಲಾಖೆಗೆ ಅಭಿನಂದನೆ ಸಲ್ಲಿಸುವೆ. ಇನ್ನೊಬ್ಬ ಶಂಕಿತ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಸಂಶಯಾಸ್ಪದ ಉಗ್ರರ ಜಾಲ ಬೇಧಿಸಲು ತನಿಖೆಯನ್ನು ಎನ್​ಐಎಗೆ ಒಪ್ಪಿಸಬೇಕು. | ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಆನ್​ಲೈನ್​ನಲ್ಲಿ ಫಂಡಿಂಗ್: ಶಂಕಿತ ಐವರು ಉಗ್ರರರ ಮೊಬೈಲ್​ಗಳಿಗೆ ಗೂಗಲ್ ಪೇ, ಫೋನ್​ಪೇ ಸೇರಿ ಆನ್​ಲೈನ್​ನಲ್ಲಿ ಹಣ ಬಂದಿರುವ ಸಾಕ್ಷ್ಯ ಲಭ್ಯವಾಗಿದೆ. ಸಣ್ಣ ಸಣ್ಣ ಪ್ರಮಾಣದಲ್ಲಿ ಹಣ ಶಂಕಿತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಐವರ ಬಳಿ 12 ಮೊಬೈಲ್​ಗಳು ಪತ್ತೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಸಿಐಡಿ ಸೈಬರ್ ಸೆಲ್ ಸಹಾಯದಿಂದ ಫೋನ್​ನಲ್ಲಿನ ರಹಸ್ಯ ಮಾಹಿತಿ ಕಲೆ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜತೆಗೆ ಆರೋಪಿತರ ಬ್ಯಾಂಕ್ ಖಾತೆಗಳ ಬಗ್ಗೆ ಸಂಬಂಧಪಟ್ಟ ಬ್ಯಾಂಕ್​ಗಳಿಗೆ ಮಾಹಿತಿ ಕಲೆ ಹಾಕುತ್ತಿದ್ದು, ಇವರ ಬ್ಯಾಂಕ್ ಖಾತೆಗೆ ಯಾವ ಯುಪಿಐಯಿಂದ ಹಣ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬಹುತೇಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೇದ್ ಅಹಮದ್ ಮತ್ತು ಟಿ. ನಾಸೀರ್ ಬೆಂಬಲಿಗರ ಕಡೆಯಿಂದ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net