ಅಪಘಾತಕ್ಕೆ ಬೇಕು ಬ್ರೇಕು; ಹೆದ್ದಾರಿಗಳ ನಿರ್ವಹಣೆ, ನಿರ್ಲಕ್ಷ್ಯ ಧೋರಣೆ ಸಲ್ಲ

Editorial
Published on

ರಾಜ್ಯದ ಏಳು ನಗರಗಳಲ್ಲಿ ವರ್ತಲ ರಸ್ತೆ ಹಾಗೂ ಪಟ್ಟಣಗಳೆರಡರಲ್ಲಿ ಬೈಪಾಸ್ ನಿರ್ವಿುಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ತ್ವರಿತಗತಿಯಲ್ಲಿ ಅನುಮತಿ ಪಡೆದುಕೊಳ್ಳಲು ಉದ್ದೇಶಿಸಿರುವುದು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬಂದರೆ ಬೆಳವಣಿಗೆ ಕಾಣುತ್ತಿರುವ ಈ ನಗರಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಜಿಲ್ಲಾ ಕೇಂದ್ರಗಳಾದ ಕಲಬುರಗಿ, ಗದಗ, ರಾಯಚೂರು, ಹಾವೇರಿ, ಧಾರವಾಡ, ಬೀದರ್, ವಿಜಯಪುರ ನಗರಗಳಲ್ಲಿ ವರ್ತಲ ರಸ್ತೆ ಹಾಗೂ ನರಗುಂದ ಮತ್ತು ನವಲಗುಂದ ಬೈಪಾಸ್​ಗೆ ಪ್ರಸಕ್ತ ಹಣಕಾಸು ವರ್ಷದಲ್ಲೇ ಅನುಮತಿ ನೀಡಬೇಕೆಂದು ಕೋರಲಾಗಿದ್ದು, ಶೀಘ್ರದಲ್ಲಿ ಒಪ್ಪಿಗೆ ದೊರೆಯಬಹುದಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇ ದಶಪಥ ಹೆದ್ದಾರಿಯಲ್ಲಿ ಒಳಚರಂಡಿ ವ್ಯವಸ್ಥೆಗೆ ಹೊಸ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸ್ವಯಂಪ್ರೇರಿತವಾಗಿ ಪ್ರಸ್ತಾಪಿಸಿದ್ದಾರೆ. ಎಲ್ಲೆಲ್ಲಿ ನೀರು ನಿಂತಿದೆ, ನಿಲ್ಲಬಹುದು ಎಂದು ತಿಳಿದುಕೊಂಡು ಒಳಚರಂಡಿ ವ್ಯವಸ್ಥೆ ನಿರ್ವಣಕ್ಕೆ ಯೋಜನೆ ರೂಪಿಸಿ ಸಲ್ಲಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸೂಚನೆ ಯನ್ನೂ ನೀಡಿದ್ದಾರೆ. ಕೆಲವೆಡೆ ಕೆರೆ- ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಅವೈಜ್ಞಾನಿಕವಾಗಿ ನಿರ್ವಿುಸಲಾಗಿದೆ ಎಂದ ಆರೋಪಗಳಿಗೆ ಪುಷ್ಟಿ ಎನ್ನುವ ರೀತಿಯಲ್ಲಿ ಈಚೆಗೆ ಸುರಿದ ಅತಿವೃಷ್ಟಿ ಸಂದರ್ಭದಲ್ಲಿ ಈ ದಶಪಥ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ಸ್ಥಗಿತವಾಗಿತ್ತು. ಈಗ ಸ್ವತಃ ಕೇಂದ್ರ ಸಚಿವರು ಸುಧಾರಣೆಗೆ ಕ್ರಮ ಕೈಗೊಳ್ಳಲು ಸೂಚಿಸಿರುವುದರಿಂದ ಮುಂದೆ ಇಂಥ ತೊಂದರೆಗಳಿಗೆ ಆಸ್ಪದವಿರದಂತೆ ರಸ್ತೆ ನಿರ್ವಿುಸಬಹುದೆಂದು ಆಶಿಸಬಹುದಾಗಿದೆ.

ಇನ್ನು, ಬೇರೆ ಬೇರೆ ಹೆದ್ದಾರಿಗಳು ಅನೇಕ ಕಡೆಗಳಲ್ಲಿ ಹಾಳಾಗಿವೆ. ಅನೇಕ ಕಡೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ನೀರು ತುಂಬಿ ಗೋಚರಿಸದೆ ಅಪಾಯಕ್ಕೂ ಕಾರಣವಾಗುತ್ತಿವೆ. ಹೆದ್ದಾರಿಗಳಲ್ಲಿ ಸಾಮಾನ್ಯವಾಗಿ ಸವಾರರು ವಾಹನಗಳನ್ನು ವೇಗವಾಗಿಯೇ ಚಲಾಯಿಸುವುದರಿಂದ ಒಂದು ಚಿಕ್ಕ ಗುಂಡಿಯೂ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಹೀಗಾಗಿಯೇ ನ್ಯಾಯಾಲಯಗಳು ರಸ್ತೆ ಗುಂಡಿಗಳ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಿಸುತ್ತಿಲ್ಲ. ಇನ್ನು ಸಾರ್ವಜನಿಕರು ಕೂಡ ವಾಹನ ಚಲಾಯಿಸುವಾಗ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾದುದು ಅಷ್ಟೇ ಮಹತ್ವದ್ದಾಗಿದೆ. ಕಾರಿನಲ್ಲಿ ಹಿಂಬದಿ ಕುಳಿತಿದ್ದ ಉದ್ಯಮಿ ಸೈರಸ್ ಮಿಸ್ತ್ರಿ ಅವರು ಅಪಘಾತದ ಸಂಭವಿಸಿದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸಿದ್ದರೆ ಅವರ ಜೀವ ಉಳಿಯುವ ಸಾಧ್ಯತೆ ಇತ್ತು ಎಂಬುದು ತನಿಖೆಯಿಂದ ತಿಳಿದುಬಂದಿರುವುದು ಈ ನಿಟ್ಟಿನಲ್ಲಿ ಒಂದು ಸ್ಪಷ್ಟ ಉದಾಹರಣೆ. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಅಪಘಾತ ಸಂಭವಿಸುವ ದೇಶ ಎಂಬ ಹಿನ್ನೆಲೆಯಲ್ಲಿ, ರಸ್ತೆ ನಿರ್ವಹಣೆಯಲ್ಲಿ ಸರ್ಕಾರ ತನ್ನ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಿದಾಗ ಹಾಗೂ ಸಾರ್ವಜನಿಕರೂ ಸಂಚಾರ ನಿಯಮಗಳನ್ನು ಪಾಲಿಸಿದಾಗ ಅಪಘಾತಗಳನ್ನು ಆದಷ್ಟು ನಿಯಂತ್ರಿಸಿ, ಸಾವು-ನೋವು ತಪ್ಪಿಸಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net