

ಸಾಲಿಗ್ರಾಮ: ಸ್ವಾತಂತ್ರೃ ದಿನಾಚರಣೆ ಸಂಬಂಧ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಮುಂದೂಡಲಾಯಿತು.
ಸಮಿತಿಯ ಅಧ್ಯಕ್ಷ ತಹಸೀಲ್ದಾರ್ ಎಸ್.ಎನ್.ನರಗುಂದ ಅಧ್ಯಕ್ಷತೆಯಲ್ಲಿ ಶನಿವಾರ ಕರೆಲಾಗಿದ್ದ ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರಿಂದ ಸಭೆಯನ್ನು ಮುಂದೂಡಲಾಯಿತು.
ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳ ಸಂಬಂಧ ಕೆರೆಯುವ ಪೂರ್ವಭಾವಿ ಸಭೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಗೈರಾಗುತ್ತಿರುವುದಕ್ಕೆ ವಿವಿಧ ಸಂಘಟನೆಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಸ್.ಎನ್.ನರಗುಂದ ಪ್ರತಿ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಮತ್ತೊಮ್ಮೆ ದಿನ ನಿಗದಿ ಪಡಿಸಿ ಸಭೆ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸುಧಾರೇವಣ್ಣ, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಉಪನ್ಯಾಸಕ ನಾಗರಾಜ್ ಇತರರು ಇದ್ದರು.