Zubeen Garg | ಜುಬೀನ್ ಗರ್ಗ್ ಸಾವು; ಸಿಐಡಿಗೆ ದೂರು ನೀಡಿದ ಕುಟುಂಬ ಸದಸ್ಯರು

Zubeen Garg
Published on

Zubeen Garg: ಅಸ್ಸಾಂನ ಗಾಯಕ ಜುಬೀನ್ ಗರ್ಗ್ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಸಾವನ್ನಪ್ಪಿದ ಬಗ್ಗೆ ಅವರ ಕುಟುಂಬವು ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ದೂರು ನೀಡಿದ್ದು, ಘಟನೆಯ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ದೂರು ನೀಡಿದವರು ಯಾರು?

ಗರ್ಗ್ ಅವರ ಪತ್ನಿ ಗರಿಮಾ ಮತ್ತು ಅವರ ಸಹೋದರಿ ಪಾಮ್ ಬೋರ್ಥಕೂರ್ ಮತ್ತು ಗರ್ಗ್ ಚಿಕ್ಕಪ್ಪ ಮನೋಜ್ ಕುಮಾರ್ ಬೋರ್ಥಕೂರ್ ಸಿಐಡಿಗೆ ದೂರು ನೀಡಿದ್ದು, ಸಹಿ ಹಾಕಿರುವ ಪತ್ರವನ್ನು ಶನಿವಾರ (ಸೆ 27) ಸಿಐಡಿಗೆ ಇಮೇಲ್ ಮೂಲಕ ಕಳುಹಿಸಿಲಾಗಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ. ಈ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ನಾವು ಗಾರ್ಗ್ ಅವರ ಕುಟುಂಬದಿಂದ ದೂರು ಸ್ವೀಕರಿಸಿದ್ದೇವೆ, ಅವರ ಸಾವಿನ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದರು. ಗರ್ಗ್​​ ಸಾವಿಗೆ ಸಂಬಂಧಪಟ್ಟಂತೆ ಈಗಾಗಲೇ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ತನಿಖೆ ನಡೆಸುತ್ತಿದೆ, ಈಗ ಕುಟುಂಬವು ಸಲ್ಲಿಸಿದ ದೂರನ್ನು ಸಹ ತಂಡವು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು. ಭಾನುವಾರ ಗುವಾಹಟಿಯ ಕಹಿಲಿಪಾರ ಪ್ರದೇಶದಲ್ಲಿರುವ ಗಾರ್ಗ್ ಅವರ ನಿವಾಸಕ್ಕೆ ಎಸ್‌ಐಟಿ ತಂಡ ಭೇಟಿ ನೀಡಿದ್ದು, ನಾವು ಕೆಲವು ವಿಷಯಗಳನ್ನು ಕೇಳಬೇಕಾಗಿತ್ತು ಮತ್ತು ನಮ್ಮ ಅಧಿಕಾರಿಗಳು ಕುಟುಂಬವನ್ನು ಭೇಟಿಯಾದರು. ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಂಬಂಧಪಟ್ಟವರಿಗೆ ನೋಟಿಸ್​ ಜಾರಿ

ಅಸ್ಸಾಂ ಪೊಲೀಸರ ಸಿಐಡಿ, ಸಿಂಗಾಪುರದಲ್ಲಿ ಗಾಯಕ ಜುಬೀನ್ ಗರ್ಗ್ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ಮಾಹಿತಿ ಇರುವವರಿಗೆ ನೋಟಿಸ್ ಜಾರಿ ಮಾಡಿದ್ದು, 10 ದಿನಗಳಲ್ಲಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚನೆ ನೀಡಿದ್ದು, ತನಿಖೆ ಮುಂದುವರೆದಿದೆ. ಗರ್ಗ್ ಸಾವಿನ ತನಿಖೆಗಾಗಿ ಸಿಐಡಿ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ), ಈಶಾನ್ಯ ಭಾರತ ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ನಿವಾಸದಲ್ಲಿ ಹುಡುಕಾಟ ನಡಿಸಿದೆ. ಎಸ್‌ಐಟಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರದಿದ್ದರೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಶಿಫಾರಸು ಮಾಡುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಸಿದ್ಧಾರ್ಥ್ ಪರ ವಾದಿಸಿದ್ದ ಗರಿಮಾ

ಜುಬೀನ್ ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಕೈಬಿಡಬೇಕೆಂದು ಮನವಿ ಮಾಡಿದ್ದ ಜುಬೀನ್​ ಪತ್ನಿ ಗರಿಮಾ, ಪತಿಯ ಮರಣದ ನಂತರ ವಿಡಿಯೋ ಮೂಲಕ ಸಿದ್ಧಾರ್ಥ್ ಬಗ್ಗೆ ಹಬ್ಬಿರುವ ಎಲ್ಲ ಆರೋಪಗಳನ್ನು ಬದಿಗಿಡಬೇಕು, ಜುಬೀನ್ ಅನೇಕ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿದ್ದು, ಅವುಗಳನ್ನು ಒಬ್ಬಂಟಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಸಿದ್ಧಾರ್ಥ್ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕೆಂದು ಮನವಿ ಮಾಡಿಕೊಂಡಿದ್ದರು.

ಶ್ಯಾಮಕಾನು, ಸಿದ್ಧಾರ್ಥ್ ವಿರುದ್ಧ ಲುಕ್ ಔಟ್ ನೋಟಿಸ್

ಜುಬೀನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮ್‌ಕಾನು ಮತ್ತು ಸಿದ್ಧಾರ್ಥ್ ವಿರುದ್ಧ ಲುಕ್-ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಅಕ್ಟೋಬರ್ 6 ರೊಳಗೆ ಗುವಾಹಟಿಯಲ್ಲಿರುವ ಸಿಐಡಿ ಕಚೇರಿಯ ಮುಂದೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಲಾಗಿದೆ. ಇದನ್ನು ದಿಕ್ಕರಿಸಿದರೆ ರಾಜ್ಯ ಪೊಲೀಸರು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net